ADVERTISEMENT

ಮಂಗಿಶೆಟ್ಟಿ ನರಸಿಂಹಯ್ಯ ಸೇವೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:31 IST
Last Updated 24 ನವೆಂಬರ್ 2020, 3:31 IST
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು   

ಚಿಕ್ಕಬಳ್ಳಾಪುರ: ‘ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಸಾರ್ಥಕ ಸೇವೆಗೈದ ಸಾಧಕರ ಉದಾರತೆಗೆ ಬೆಲೆ ಕಟ್ಟಲಾಗದು. ಅವರ ಮಾರ್ಗದರ್ಶನ ಮತ್ತು ಆದರ್ಶಗಳನ್ನು ರೂಢಿಸಿಕೊಂಡು ಸಮಾಜದ ಒಳಿತಿಗೆ ತಮ್ಮ ಕೈಲಾದ ಸೇವೆ ಸಲ್ಲಿಸುವ ಗುಣ ರೂಢಿಸಿಕೊಂಡರೆ ನಮ್ಮ ಬದುಕು ಹಸನಾಗಬಲ್ಲದು’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ರಮೇಶ್ ಹೇಳಿದರು.

ಮಂಗಿಶೆಟ್ಟಿ ನರಸಿಂಹಯ್ಯ ಅವರ 48ನೇ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಮಂಗಿಶೆಟ್ಟಿ ನರಸಿಂಹಯ್ಯ, ರಂಗಮ್ಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಂಗಿಶೆಟ್ಟಿ ನರಸಿಂಹಯ್ಯ ಅವರು ಸಮಾಜದ ಒಳಿತಿಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟು ನಾನಾ ಸೇವಾ ಕಾರ್ಯಗಳನ್ನು ಮಾಡಿದ್ದರು. ಅವುಗಳು ಮುಂದುವರಿದುಕೊಂಡು ಹೋಗಬೇಕು ಎನ್ನುವುದು ಅವರ ಆಶಯವಾಗಿತ್ತು. ಅದಕ್ಕಾಗಿ ಟ್ರಸ್ಟ್ ರಚಿಸಿ ಅವರ ಕನಸಿನಂತೆ ಕಳೆದ ನಾಲ್ಕು ದಶಕಗಳಿಂದಲೂ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಮಂಗಿಶೆಟ್ಟಿ ನರಸಿಂಹಯ್ಯ ಅವರ ದೂರದೃಷ್ಟಿಯ ಫಲವಾಗಿ ಜಿಲ್ಲೆಯ ಸಹಸ್ರಾರು ವಿದ್ಯಾರ್ಥಿಗಳು, ಬಡಜನತೆಗೆ ಸಾಕಷ್ಟು ನೆರವು ದೊರೆತಿದೆ. ಸಮಾಜಕ್ಕೆ ಸಂಘ, ಸಂಸ್ಥೆಗಳ ನೆರವು ಅತ್ಯಗತ್ಯವಾಗಿದೆ. ಇಂತಹ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿವಿಧ ವರ್ಗದ ಜನತೆಗೆ ನೀಡುತ್ತಿರುವ ಈ ಸೇವೆ ಶ್ಲಾಘನೀಯ. ಸಂಘ, ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದೆ ಬರಬೇಕು’ ಎಂದರು.

ಟ್ರಸ್ಟ್ ಅಧ್ಯಕ್ಷ ಎಂ.ಎನ್. ಕೃಷ್ಣಮೂರ್ತಿ ಮಾತನಾಡಿ, ‘ಮಂಗಿಶೆಟ್ಟಿ ನರಸಿಂಹಯ್ಯ ಅವರು ಶಿಕ್ಷಣ ಕ್ಷೇತ್ರದ ಒಳಿತಿಗಾಗಿ ದೂರದೃಷ್ಟಿ ಹೊಂದಿ ಸಂಕಲ್ಪ ತೊಟ್ಟವರಾಗಿದ್ದರು. ಅದರ ಫಲವಾಗಿ ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಅನೇಕ ಬಗೆಯ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬರುತ್ತಿದೆ’ ಎಂದು ಹೇಳಿದರು.

ಟ್ರಸ್ಟ್‌ನ ಪದಾಧಿಕಾರಿಗಳು ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಸುಲ್ತಾನಪೇಟೆಯ ಸಾಯಿ ದ್ವಾರಕಾಮಯಿ ವೃದ್ಧಾಶ್ರಮದಲ್ಲಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಟ್ರಸ್ಟ್‌ನ ಸಹ ಕಾರ್ಯದರ್ಶಿ ಟಿ. ನರಸಿಂಹಮೂರ್ತಿ, ಸದಸ್ಯರಾದ ಜಿ.ವಿ. ನಾಗರಾಜ್, ವಿ. ಕೃಷ್ಣಮೂರ್ತಿ, ಎ.ವಿ. ಬೈರೇಗೌಡ, ಲಕ್ಷ್ಮಣಮೂರ್ತಿ, ಎನ್. ಸತ್ಯನಾರಾಯಣ, ಸಾಯಿ ದ್ವಾರಕಾಮಯಿ ವೃದ್ಧಾಶ್ರಮದ ವ್ಯವಸ್ಥಾಪಕ ಮುರಳಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.