ADVERTISEMENT

ಮಾವು; ಸುಧಾರಿತ ಕ್ರಮ ಅನುಸರಿಸಿ

ಮಾವು ಅಭಿವೃದ್ಧಿ ಮತ್ತು ಕೊಯ್ಲೋತ್ತರ ಕೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 17:10 IST
Last Updated 29 ಮೇ 2020, 17:10 IST
ಕೊಯ್ಲು ಮಾಡಿರುವ ಮಾವಿನ ಕಾಯಿಗಳು (ಸಾಂಧರ್ಬಿಕ ಚಿತ್ರ)
ಕೊಯ್ಲು ಮಾಡಿರುವ ಮಾವಿನ ಕಾಯಿಗಳು (ಸಾಂಧರ್ಬಿಕ ಚಿತ್ರ)   

ಚಿಂತಾಮಣಿ: ‘ಕೊಯ್ಲೋತ್ತರ ತಂತ್ರಜ್ಞಾನಗಳಾದ ಕೊಯ್ಲು ವಿಧಾನ, ಹಣ್ಣು ಮಾಗುವಿಕೆ, ವರ್ಗೀಕರಣ, ಪ್ಯಾಕ್ ಮಾಡುವುದು ಹಾಗೂ ಸಾಗಾಣಿಕೆ ವಿಧಾನಗಳನ್ನು ಅನುಸರಿಸಿದರೆ ಮಾವು ಬೆಳೆಗಾರರಿಗೆ ಹೆಚ್ಚಿನ ಲಾಭ ದೊರೆಯುತ್ತದೆ’ ಎಂದು ನಗರದ ಮಾವು ಅಭಿವೃದ್ಧಿ ಮತ್ತು ಕೊಯ್ಲೋತ್ತರ ಕೇಂದ್ರ ಸಲಹೆ ನೀಡಿದೆ.

ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಕಾಯಿಗಳು ಪರಿಪಕ್ವವಾಗುವಲ್ಲಿ ಏರುಪೇರಾಗಿದೆ. ತೋಟಗಳಲ್ಲಿ ಹಣ್ಣು, ಕಾಯಿ, ಪಿಂದೆಗಳು ಸಹ ಇವೆ. ಚೆನ್ನಾಗಿ ಬಲಿತಿರುವ ಕಾಯಿಗಳನ್ನು ಮಾತ್ರ ಕಟಾವು ಮಾಡಬೇಕು ಎಂದು ಕೇಂದ್ರದ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಕಾಯಿಗಳ ತೊಟ್ಟಿನ ಭಾಗದಲ್ಲಿ ಸಣ್ಣ ಗುಳಿಯಾಕಾರದ ಚಿಹ್ನೆ, ಬಣ್ಣ ಗಾಢ ಹಸಿರಿನಿಂದ ತಿಳಿ ಹಸಿರಿಗೆ ತಿರುಗುವುದು, ಪಕ್ಷಿಗಳು ಕಾಯಿಗಳನ್ನು ತಿನ್ನುವುದು, ಕಾಯಿಗಳು ಮರದಿಂದ ಉದುರುವುದನ್ನು ಗುರುತಿಸಿ ಬಲಿತಿರುವುದನ್ನು ಮನದಟ್ಟು ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಕೊಯ್ಲು ವಿಧಾನ: ಮಾವು ಕಟಾವು ಮಾಡುವ ಹಿಂದಿನ 15 ದಿನಗಳಲ್ಲಿ ಯಾವುದೇ ಕ್ರಿಮಿನಾಶಕಗಳನ್ನು ಸಿಂಪಡಿಸಬಾರದು. ಸ್ಟೈನ್‌ಲೆಸ್ ಸ್ಟೀಲ್ ಕತ್ತರಿಯಿಂದ ಅಥವಾ ಯಂತ್ರದಿಂದ ಕಾಯಿಗೆ ಗಾಯವಾಗದ ಹಾಗೆ ಎಚ್ಚರವಹಿಸಿ ಕತ್ತರಿಸಬೇಕು. ರೋಟ ಉಪಯೋಗಿಸಿ ಕಾಯಿಗಳನ್ನು ಕೊಯ್ಲು ಮಾಡಬಹುದು. ಕಾಯಿಗಳಿಗೆ ಸುಮಾರು 8-10 ಸೆ.ಮೀ ತೊಟ್ಟನ್ನು ಉಳಿಸಿಕೊಂಡು ಕತ್ತರಿಸಬೇಕು. ಸ್ವಚ್ಛಗೊಳಿಸಿರುವ ಪ್ಲಾಸ್ಟಿಕ್ ಚೌಕಾಕಾರದ ಕ್ರೇಟ್‌ಗಳಲ್ಲಿ ಕಾಯಿಗಳನ್ನು ತುಂಬಬೇಕು ಎಂದು ಸಲಹೆ ನೀಡಿದರು.

ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಬೆರೆಸಿದ ನೀರಿನಲ್ಲಿ ಕಾಯಿಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಉಗುರು ತಗುಲದಂತೆ ಹಾಗೂ ಒಂದಕ್ಕೊಂದು ತಿಕ್ಕದಂತೆ ಎಚ್ಚರಿಕೆ ವಹಿಸಬೇಕು. ನಂತರ ಗಾಯಗೊಂಡ, ಕೀಟ ಪೀಡಿತ, ವಿಕಾರಗೊಂಡ ಮತ್ತು ಎಳೆಯ ಕಾಯಿಗಳನ್ನು ಬೇರ್ಪಡಿಸಬೇಕು. ಕಾಯಿಗಳ ಗಾತ್ರ ಆಧರಿಸಿ ದೊಡ್ಡ, ಮಧ್ಯಮ, ಸಣ್ಣ ಗಾತ್ರದ ಕಾಯಿಗಳನ್ನಾಗಿ ವರ್ಗೀಕರಿಸಬೇಕು ಎಂದು ಹೇಳಿದರು.

ಮಾಗಿಸುವುದು: ಬಲಿತಿರುವ ಕಾಯಿಗಳನ್ನು ಕೊಯ್ಲು ಮಾಡಿದರೆ ಸಹಜವಾಗಿ 5- 10 ದಿನಗಳಲ್ಲಿ ಪರಿಪಕ್ವವಾಗಿ ಹಣ್ಣುಗಳಾಗುತ್ತವೆ. ಕಾಯಿಗಳನ್ನು ಕ್ಯಾಲ್ಸಿಯಂ ಕಾರ್ಬೈಡ್ ಉಪಯೋಗಿಸಿ ಮಾಗಿಸುವುದು ಅಪಾಯಕಾರಿ ಕ್ರಮ. ಅದನ್ನು ನಿರ್ಬಂಧಿಸಲಾಗಿದೆ. ಇಥಲಿನ್ ಅನಿಲ ಬಳಸಿ ಕಾಯಿಗಳನ್ನು ಕೃತಕವಾಗಿ ಮಾಗಿಸಬಹುದು. ಮಾಗಿದ ಹಣ್ಣು ಉತ್ತಮವಾಗಿ ಗಾಳಿ ಆಡುವಂತಹ ಕೊಠಡಿಯಲ್ಲಿ ಸಂಗ್ರಹಿಸಿ ಇಡಬೇಕು ಎಂದು ತಿಳಿಸಿದ್ದಾರೆ.

ಪ್ಯಾಕ್ ಮಾಡುವುದು: ಮಾವಿನ ಹಣ್ಣುಗಳನ್ನು ಸ್ಥಳೀಯ ಅಥವಾ ದೂರದ ಮಾರುಕಟ್ಟೆಗೆ ರವಾನಿಸಲು ಕಾಗದದ ರಟ್ಟಿನ ಪೆಟ್ಟಿಗೆಗಳಲ್ಲಿ ಪದರಗಳಲ್ಲಿ ಜೋಡಿಸಬಹುದು. ಇದರಲ್ಲಿ ಕಾಗದದ ಚೂರುಗಳನ್ನು ಹಾಗೂ ಗಾಳಿ ತುಂಬದ ಪ್ಯಾಡ್ ಹಾಸಿದರೆ ಹಣ್ಣುಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಪ್ರತಿ ಹಣ್ಣಿಗೂ ಟಿಶ್ಯೂ ಪೇಪರ್ ಸುತ್ತುವುದರಿಂದ ಹಣ್ಣು ಹಾಳಾಗುವ ಪ್ರಮಾಣ ಕಡಿಮೆ ಆಗುತ್ತದೆ ಎನ್ನುತ್ತಾರೆ ಕೃಷ್ಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.