ಅಪಘಾತ
–ಪ್ರಾತಿನಿಧಿಕ ಚಿತ್ರ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಸಾವಿನ ದಾರಿಗಳಾಗಿವೆ. ನಿತ್ಯವೂ ಒಂದಲ್ಲಾ ಒಂದು ಕಡೆ ಮಾರಣಾಂತಿಕ ಅಥವಾ ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳು ವರದಿ ಆಗುತ್ತಿವೆ. ಇದಿಷ್ಟೇ ಅಲ್ಲ ರಾಜ್ಯ ಮತ್ತು ಜಿಲ್ಲಾ ರಸ್ತೆಗಳಲ್ಲಿಯೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.
ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 44 ಬೀಡಗಾನಹಳ್ಳಿಯಿಂದ ಬಾಗೇಪಲ್ಲಿಯವರೆಗೆ 65 ಕಿ.ಮೀ ಇದೆ. ರಾಷ್ಟೀಯ ಹೆದ್ದಾರಿ 69 ಅಂಗನಹಳ್ಳಿಯಿಂದ ಗೋಪಲ್ಲಿ ಕ್ರಾಸ್‌ವರೆಗೆ 98 ಕಿ.ಮೀ ಇದೆ. ಈ ಎರಡೂ ಹೆದ್ದಾರಿಗಳಲ್ಲಿ ಬೈಕ್, ಕಾರು, ನಾಲ್ಕು ಚಕ್ರದ ವಾಹನಗಳ ಅಪಘಾತ ನಡೆಯುತ್ತಲೇ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಚ್ಚರಿ ಎನ್ನುವಂತೆ 2023ರಿಂದ 2025ರ ಇಲ್ಲಿಯವರೆಗೆ ಅಂದರೆ ಕೇವಲ ಎರಡೂವರೆ ವರ್ಷದಲ್ಲಿ ರಸ್ತೆ ಅಪಘಾತಕ್ಕೆ 782 ಮಂದಿ ಪ್ರಾಣತೆತ್ತಿದ್ದಾರೆ. 716 ಮಾರಣಾಂತಿಕ ಅಪಘಾತ ಪ್ರಕರಣಗಳು ಸಹ ನಡೆದಿವೆ. ಈ ಅಪಘಾತದಿಂದ 417 ಜನರು ಗಾಯಗೊಂಡಿದ್ದಾರೆ. ಈ ಮಾರಣಾಂತಿಕ ಪ್ರಕರಣಗಳಲ್ಲಿ ಗಾಯಗೊಂಡಿರುವವರಿಗಿಂತ ಸತ್ತವರೇ ಹೆಚ್ಚು. ಅಂದರೆ ರಸ್ತೆ ಅಪಘಾತಗಳ ತೀವ್ರತೆಯನ್ನು ಇದು ಎತ್ತಿ ತೋರುತ್ತಿದೆ.
ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 1,313 ಮಾರಣಾಂತಿಕವಲ್ಲದ ಅಪಘಾತ ಪ್ರಕರಣಗಳು ಜರುಗಿವೆ. ಇವುಗಳಲ್ಲಿ 1,850 ಮಂದಿ ಗಾಯಗೊಂಡಿದ್ದಾರೆ. ಹೀಗೆ ರಸ್ತೆ ಅಪಘಾತಗಳು ವಾಹನಗಳ ಸವಾರರನ್ನು ನಿದ್ದೆಗೆಡಿಸಿದೆ.
ಅಪಘಾತ ಸ್ಥಳಗಳ ಗುರುತು: ಜಿಲ್ಲೆಯಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಇಲಾಖೆ 29 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದೆ. ಈ ಪೈಕಿ 16 ಸ್ಥಳಗಳನ್ನು ಸಹ ಸರಿಪಡಿಸಲಾಗಿದೆ.
ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಳವನ್ನು ಮನಗಂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮಗಳನ್ನೂ ವಹಿಸಿದೆ. ಜಿಲ್ಲಾಧಿಕಾರಿ ಅವರ ನೇತೃತ್ವದ ರಸ್ತೆ ಸುರಕ್ಷತಾ ಸಮಿತಿಯು ಮೂರು ಸಭೆಗಳನ್ನು ಸಹ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ. ಹೀಗಿದ್ದರೂ ಅಪಘಾತ ಪ್ರಮಾಣ ಮಾತ್ರ ಹೆಚ್ಚುತ್ತಲೇ ಇದೆ.
ಕಳೆದ ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಮೋಟರ್ ವಾಹನ ಕಾಯ್ದೆಯಡಿ 1,35,803 ಪ್ರಕರಣಗಳು ದಾಖಲಾಗಿವೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸಾರಿ ಹೇಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.