ADVERTISEMENT

ಶಿಡ್ಲಘಟ್ಟ| ಆಟ ಮುಗಿಸಿದ ‘ಮಯೂರ’ ಚಿತ್ರಮಂದಿರ

1981ರಲ್ಲಿ ಆರಂಭವಾಗಿದ್ದ ಟಾಕೀಸ್‌

ಡಿ.ಜಿ.ಮಲ್ಲಿಕಾರ್ಜುನ
Published 7 ಫೆಬ್ರುವರಿ 2023, 2:46 IST
Last Updated 7 ಫೆಬ್ರುವರಿ 2023, 2:46 IST
ಶಿಡ್ಲಘಟ್ಟದ ಮಯೂರ ಚಿತ್ರಮಂದಿರ
ಶಿಡ್ಲಘಟ್ಟದ ಮಯೂರ ಚಿತ್ರಮಂದಿರ   

ಶಿಡ್ಲಘಟ್ಟ: ನಾಲ್ಕು ದಶಕಗಳ ಕಾಲ ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಜನರ ಮನರಂಜಿಸಿದ್ದ ‘ಮಯೂರ’ ಚಿತ್ರಮಂದಿರ ತನ್ನ ಆಟ ಮುಗಿಸಿದೆ. ಆ ಮೂಲಕ ಈಗಾಗಲೇ ಮರೆಯಾದ ವಿಜಯಲಕ್ಷ್ಮಿ ಚಿತ್ರಮಂದಿರದ ಸಾಲಿಗೆ ಮಯೂರ ಕೂಡ ಸೇರಿಕೊಳ್ಳುತ್ತಿದೆ.

ಈ ಚಿತ್ರಮಂದಿರದಿಂದಾಗಿ ಆ ಪ್ರದೇಶವು ಮಯೂರ ಸರ್ಕಲ್ ಎಂದೇ ಅಘೋಷಿತವಾಗಿ ಹೆಸರಾಗಿತ್ತು. ಊರಿನ ಹೆಗ್ಗುರುತಾಗಿ, ಚಲನಚಿತ್ರಗಳ ಮೂಲಕ ಮನರಂಜನೆಯ ತಾಣವಾಗಿ, ಒಂದೆರಡು ಪೀಳಿಗೆಯ ಜನರ ಭಾವಕೋಶದಲ್ಲಿ ಒಂದಾಗಿದ್ದ ‘ಮಯೂರ’ ಚಿತ್ರಮಂದಿರ ಇನ್ನು ಇತಿಹಾಸವಷ್ಟೇ.

ಮಯೂರ ಚಿತ್ರಮಂದಿರವನ್ನು ಕಟ್ಟಿದವರು ಎನ್.ಸೀತಾರಾಮಯ್ಯ ಮತ್ತು ಎನ್.ವೆಂಕಟನಾರಾಯಣಯ್ಯ ಸಹೋದರರು. ತಮ್ಮದೇ ಸ್ವಂತ ಜಮೀನಿನಲ್ಲಿ ಅವರು 1976ರಲ್ಲಿ ಚಿತ್ರಮಂದಿರದ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಐದು ವರ್ಷಗಳಲ್ಲಿ ಸಂಪೂರ್ಣಗೊಳಿಸಿದರು. ಆಗಿನ ಕಾಲದಲ್ಲಿ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡಿ, ಎಲ್ಲ ಹೊಚ್ಚ ಹೊಸ ಸಾಮಗ್ರಿಗಳನ್ನು ಬಳಸಿ, ₹16 ಲಕ್ಷ ವೆಚ್ಚದಲ್ಲಿ 702 ಆಸನ ವ್ಯವಸ್ಥೆಯುಳ್ಳ ಚಿತ್ರಮಂದಿರವನ್ನು ನಿರ್ಮಿಸಿದರು.

ADVERTISEMENT

1981ರ ಜುಲೈ 19 ರಂದು ಆಗಿನ ಶಾಸಕ ಎಸ್.ಮುನಿಶಾಮಪ್ಪ ಮಯೂರ ಚಿತ್ರಮಂದಿರವನ್ನು ಉದ್ಘಾಟಿಸಿದರು. ಆಗಿನ ಪುರಸಭೆ ಅಧ್ಯಕ್ಷ ಷರೀಫ್ ಮುಖ್ಯ ಅತಿಥಿಯಾಗಿದ್ದರು. ವಿಶೇಷವೆಂದರೆ ಚಿತ್ರಮಂದಿರದ ಹೆಸರೇ ಇರುವ ಡಾ. ರಾಜ್ ಕುಮಾರ್ ನಟನೆಯ ಮಯೂರ ಚಲನಚಿತ್ರ ಇಲ್ಲಿ ಮೊಟ್ಟ ಮೊದಲು ಪ್ರದರ್ಶಿಸಿದ ಸಿನಿಮಾ. 2023ರ ಜನವರಿ 31 ರಂದು ಕೊನೆಯದಾಗಿ ಪ್ರದರ್ಶಿಸಿದ ಸಿನಿಮಾ ದರ್ಶನ್‌ ಅಭಿನಯದ ಕ್ರಾಂತಿ.

ಅಣ್ಣ ತಮ್ಮ ಜೊತೆಗೂಡಿ ನಿರ್ಮಿಸಿದ್ದ ಚಿತ್ರಮಂದಿರದಿಂದ ಅಣ್ಣ ಎನ್.ಸೀತಾರಾಮಯ್ಯ 1990ರಲ್ಲಿ ಬೇರೆಯಾದರು. ಆಗ ಮಾಲೀಕತ್ವ ತಮ್ಮ ಎನ್.ವೆಂಕಟನಾರಾಯಣಯ್ಯ ಅವರದ್ದಾಯಿತು. ಕಾಲ ಕ್ರಮೇಣ ಹಲವು ಕಾರಣಗಳಿಂದ ಸಿನಿಮಾ ಮಂದಿರ ಲಾಭದಾಯಕವಲ್ಲದ್ದರಿಂದ ಅವರು ತಮ್ಮ ಅಳಿಯ ಡಾ.ಶ್ರೀನಿವಾಸ್ ಅವರಿಗೆ 2015ರಲ್ಲಿ ಮಾರಿದರು. ಅವರು ಸಿನಿಮಾ ಮಂದಿರಕ್ಕೆ ಸಾಕಷ್ಟು ಹೊಸ ರೂಪ ಕೊಟ್ಟರೂ ಅದನ್ನು 2023ರಲ್ಲಿ ಸೀಕಲ್ ರಾಮಚಂದ್ರೇಗೌಡರಿಗೆ ಮಾರಿದರು. ಹೊಸ ಮಾಲೀಕರು ಅದನ್ನು ನೆಲಸಮಗೊಳಿಸುತ್ತಿದ್ದಾರೆ.

ಶಿಡ್ಲಘಟ್ಟದ ಮೊಟ್ಟ ಮೊದಲ ಚಿತ್ರಮಂದಿರ ‘ಶಂಕರ್ ಥಿಯೇಟರ್’. ಅದನ್ನು ನಮ್ಮ ತಂದೆ ಮತ್ತು ದೊಡ್ಡಪ್ಪ 1970ರಲ್ಲಿ ಖರೀದಿಸಿ, ನಮ್ಮ ಅಕ್ಕ ವಿಜಯಲಕ್ಷ್ಮಿ ಹೆಸರನ್ನಿಟ್ಟು, 1975 ರವರೆಗೂ ನಡೆಸಿ ಮಾರಿಬಿಟ್ಟರು. ನಮ್ಮ ಅಜ್ಜಿ ವೆಂಕಟಮ್ಮ, ಮಕ್ಕಳಿಗೆ ಹೊಸ ಚಿತ್ರಮಂದಿರವನ್ನು ಕಟ್ಟುವಂತೆ ಪ್ರೇರೇಪಿಸಿದರು. ತಾಯಿಯ ಒತ್ತಾಸೆಯಿಂದ ನಮ್ಮ ತಂದೆ ಮತ್ತು ದೊಡ್ಡಪ್ಪ ಹನುಮಂತಪುರ ಬಳಿ ಇದ್ದ ಐದು ಎಕರೆ ಜಮೀನನ್ನು ಮಾರಿ, ನಮ್ಮದೇ ಸ್ಥಳದಲ್ಲಿ ಮಯೂರ ಚಿತ್ರಮಂದಿರವನ್ನು ನಿರ್ಮಿಸಿದರು. ಇದಕ್ಕೆ ಹೆಸರನ್ನು ಸೂಚಿಸಿದ್ದು ನಮ್ಮ ಅಕ್ಕ ಎಂದು ಎನ್.ವೆಂಕಟನಾರಾಯಣಯ್ಯ ಅವರ ಮಗ ರಾಮಕಿಟ್ಟಿ ತಿಳಿಸಿದರು.

ಶತದಿನೋತ್ಸವ ಸಂಭ್ರಮ

2001ರಲ್ಲಿ ತೆರೆಕಂಡ ನಟ ನಂದಮೂರಿ ಬಾಲಕೃಷ್ಣ ನಟನೆಯ ನರಸಿಂಹನಾಯ್ಡು ಸಿನಿಮಾ, ಮಯೂರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 112 ದಿನ ಪ್ರದರ್ಶನ ಕಂಡಾಗ ನಾವೆಲ್ಲಾ ಅಭಿಮಾನಿಗಳು ಸಂಭ್ರಮಿಸಿದ್ದೆವು. ಬಾಲಕೃಷ್ಣ ಅಭಿನಯದ ಸಿಂಹ ಚಲನಚಿತ್ರ ಕೂಡ 60 ದಿನ ಪ್ರದರ್ಶನ ಕಂಡಿತ್ತು. ನಮ್ಮೆಲ್ಲರ ಬದುಕಿನ ಭಾಗವಾಗಿದ್ದ ಮಯೂರ ಸಿನಿಮಾ ಮಂದಿರ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ

ಮೇಲೂರು ಶ್ರೀನಿವಾಸ್ ಪುಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.