ADVERTISEMENT

‘ಚಿಕ್ಕಬಳ್ಳಾಪುರ ಚರಿತ್ರೆಯಲ್ಲಿ ಶಾಶ್ವತ ಕಾರ್ಯಕ್ರಮ’

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:03 IST
Last Updated 25 ನವೆಂಬರ್ 2025, 5:03 IST

ಶಿಡ್ಲಘಟ್ಟ: ‘ಈ ಕಾರ್ಯಕ್ರಮವು ಚಿಕ್ಕಬಳ್ಳಾಪುರ ಜಿಲ್ಲೆಯ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಹನುಮಂತಪುರದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರು ಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ. ರೇಷ್ಮೆ ಕೃಷಿ ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದು ಒಂದೇ ಬಾರಿಗೆ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ₹200 ಕೋಟಿ ಅನುದಾನ ನೀಡಿದ್ದಾರೆ. ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯಗತವಾಗುತ್ತಿದೆ. ಕೆರೆಗಳು ತುಂಬಿದರೆ ರೈತರ ಬದುಕು ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು. 

ADVERTISEMENT

ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಬದಲಾವಣೆ ಆಗುತ್ತಿದೆ. ‌ಬೆಂಗಳೂರು ಉತ್ತರ ವಿವಿಯ ಎರಡನೇ ಹಂತದ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಜಿಲ್ಲೆಯ ರೈತರು ಹಣ್ಣು, ತರಕಾರಿ, ಹೂ ಬೇಸಾಯದ ಮೂಲಕ ಬದುಕು ಹಸನು ಮಾಡಿಕೊಂಡಿದ್ದಾರೆ ಎಂದರು.

ಎತ್ತಿನಹೊಳೆ ಯೋಜನೆಯು ಸಿದ್ದರಾಮಯ್ಯ ಅವರ ಕೊಡುವೆ. ಈ ಯೋಜನೆಯು ಅವರ ಅಮೃತ ಹಸ್ತದಿಂದಲೇ ಜಾರಿಯಾಗಿ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ದೊರೆಯಬೇಕು ಎಂದು ಕೋರಿದರು.

ಚಿಕ್ಕಬಳ್ಳಾಪುರದಲ್ಲಿ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಜಿಲ್ಲೆಯ 7 ಸಾವಿರ ಎಕರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ಹೆಜ್ಜೆ ಇಡಲಾಗಿದೆ. ಇದರಿಂದ ನಿರುದ್ಯೋಗಿ ಯುವ ಸಮುದಾಯಕ್ಕೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ‘ನನಗೆ ಜನ್ಮ ನೀಡಿದ ತಂದೆ ತಾಯಿ, ಈ ಕ್ಷೇತ್ರದ ಸ್ವಾಭಿಮಾನಿ ಮತದಾರರು ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಕೇತ್ರದ ಸ್ವಾಭಿಮಾನಿ ಮತದಾರರ ಋಣ ತೀರಿಸಬೇಕಿದೆ ಎಂದರು.

ಈ ಕ್ಷೇತ್ರದಲ್ಲಿ ನಡೆದ 16 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್‌ ಶಾಸಕರು ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಸಿದ್ದರಾಮಯ್ಯ ಅವರನ್ನು ಕೋರಿದರು.

ಕ್ಷೇತ್ರದಲ್ಲಿ 270 ಕಿ.ಮೀ ರಸ್ತೆ ಸಂಚರಿಸಲಾಗದಷ್ಟು ಹದಗೆಟ್ಟಿದೆ. ಕಳೆದ 2 ವರ್ಷಗಳಲ್ಲಿ 17 ಅಪಘಾತಗಳು ನಡೆದಿದ್ದು 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್ ಗೌಡ, ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಮುಖಂಡ ಪುಟ್ಟು ಆಂಜಿನಪ್ಪ, ಜೆಡಿಎಸ್ ಯುವ ಮುಖಂಡ ತಾದೂರು ರಘು, ತಹಶೀಲ್ದಾರ್ ಗಗನ ಸಿಂಧು, ಇಒ ಹೇಮಾವತಿ ಇನ್ನಿತರರು ಹಾಜರಿದ್ದರು.