ADVERTISEMENT

ಗುಡಿಬಂಡೆ: 2,678 ಮನೆಗಳಿಗೆ ನೀರು ಪೂರೈಕೆಗೆ ಕ್ರಮ

₹ 20.50 ಕೋಟಿ ಯೋಜನೆಗೆ ಸಚಿವ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 2:53 IST
Last Updated 11 ಫೆಬ್ರುವರಿ 2022, 2:53 IST
ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆ
ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆ   

ಗುಡಿಬಂಡೆ: ಜಲಜೀವನ್ ಮಿಷನ್‌ಯೋಜನೆಯಡಿ ತಾಲ್ಲೂಕಿನ ಅಮಾನಿಬೈರಸಾಗರ ಕೆರೆಯಿಂದ 28 ಗ್ರಾಮಗಳ ಒಟ್ಟು 2,678 ಮನೆಗಳಿಗೆ ಕೊಳಾಯಿ ಮೂಲಕ ನೀರು ಒದಗಿಸುವ ₹ 15 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಈ ಯೋಜನೆಯಿಂದ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲಾಗುವುದು. 17 ಹೊಸ ಓವರ್‌ಹೆಡ್ ಟ್ಯಾಂಕ್‌ ನಿರ್ಮಿಸಲಾಗುವುದು. ಇದು ಒಟ್ಟು ₹ 20.50 ಕೋಟಿ ವೆಚ್ಚದ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ₹ 15 ಕೋಟಿಗೆ ಮಂಜೂರಾತಿ ಸಿಕ್ಕಿದೆ. 44,541 ಮೀಟರ್ ಪೈಪ್‌ಲೈನ್ ಮಾರ್ಗ ನಿರ್ಮಾಣ ಮಾಡಿ ಆ ಮೂಲಕ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 55 ಲೀಟರ್‌(ಎಲ್‌ಪಿಸಿಡಿ) ನೀರು ಪೂರೈಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಿಂದ ಹಂಪಸಂದ್ರ ಗ್ರಾಮ ಪಂಚಾಯಿತಿಯ ಕೊಂಡರೆಡ್ಡಿಹಳ್ಳಿ, ಮಾಚಹಳ್ಳಿ, ಪಸಪಲೋಡು, ಗರುಡಾಚಾರ್ಲಪಲ್ಲಿ, ಲಕ್ಕೇನಹಳ್ಳಿ, ಬೆಣ್ಣೆಪರ್ತಿ, ಹಂಪಸಂದ್ರ, ಪೊಲಸಾನಿವೊಡ್ಲು, ನಲ್ಲಗೊಂಡೈಗಾರಹಳ್ಳಿ, ಆದಿನಾರಾಯಣಹಳ್ಳಿ, ಸಂಜೀವರಾಯನಹಳ್ಳಿ ಮರವೇನಹಳ್ಳಿ, ಓವನ್ನಗಾರಿಪಲ್ಲಿ, ಕಡೇಹಳ್ಳಿ, ಎಲ್ಲೋಡು ಪಂಚಾಯಿತಿಯ ಯರ್ರಹಳ್ಳಿ, ನಿಲಗುಂಬು, ಗುಂಡ್ಲಹಳ್ಳಿ, ಉಲ್ಲೋಡು ಪಂಚಾಯಿತಿಯ ರೂರಲ್ ಗುಡಿಬಂಡೆ, ಹಳೇಗುಡಿಬಂಡೆ, ನಿಚ್ಚನಬಂಡಹಳ್ಳಿ, ಬ್ರಾಹ್ಮಣರಹಳ್ಳಿ ಮತ್ತು ದಪ್ಪರ್ತಿ ಪಂಚಾಯಿತಿಯ ಮ್ಯಾಕಲಹಳ್ಳಿ ಭತ್ತಲಹಳ್ಳಿ, ವಾಬಸಂದ್ರ, ಉಪ್ಪಾರಹಳ್ಳಿ, ಕೊಂಡಾವಲಹಳ್ಳಿ, ಅಮಾನಿಬೈರಸಾಗರ ಗ್ರಾಮಗಳ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸೋಮಲಾಪುರದ ಸುಬ್ಬರಾಯನಕುಂಟೆಯಿಂದ ಉಲ್ಲೋಡು ಗ್ರಾಮ ಪಂಚಾಯಿತಿಯ ಉಳಿದ ಗ್ರಾಮಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅದಕ್ಕೂ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಯಲುಸೀಮೆ ಪ್ರದೇಶ ಆಗಿರುವ ಕ್ಷೇತ್ರದಲ್ಲಿ ನದಿ, ನಾಲೆಗಳು ಇಲ್ಲ. ಇದರಿಂದ ಕೃಷ್ಣಾ ನದಿ ಸೇರಿದಂತೆ ವಿವಿಧ ಜಲಮೂಲಗಳಿಂದ ಶಾಶ್ವತವಾಗಿ ರೈತರಿಗೆ ಅನುಕೂಲ ಕಲ್ಪಿಸಲು, ಕೆರೆಗಳಿಗೆ ನೀರು ಹರಿಸಲು ಹಾಗೂ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವರ ಬಳಿ ಚರ್ಚಿಸಿ ಕಾರ್ಯ ಯೋಜನೆಗಳಿಗೆ ಅನುಮೋದಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.