ADVERTISEMENT

ಚಿಂತಾಮಣಿ: ಒಂದೇ ವಾರದಲ್ಲಿ ಮೂವರ ಸಾವು

ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:43 IST
Last Updated 23 ಜುಲೈ 2025, 5:43 IST
ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   
ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್ ಸೇವೆ | ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿ ಸಾವು | ಆಸ್ಪತ್ರೆ ಎದುರು ಗ್ರಾಮಸ್ಥರ ಪ್ರತಿಭಟನೆ

ಚಿಂತಾಮಣಿ: ಆಂಧ್ರಪ್ರದೇಶದ ಗಡಿ ಭಾಗ ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾದ ತಾಲ್ಲೂಕಿನ ಮುಂಗನಹಳ್ಳಿ ಹೋಬಳಿಯ ಬಟ್ಲಹಳ್ಳಿಯಲ್ಲಿ ಆ್ಯಂಬುಲೆನ್ಸ್ ಸೌಲಭ್ಯ ಸಿಗದ ಕಾರಣ ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಜನರು ಮಂಗಳವಾರ ಪ್ರತಿಭಟನೆ ನಡೆಸಿದರು. 

ಗ್ರಾಮದಲ್ಲಿರುವ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯ ಮತ್ತು ಮೂಲಸೌಲಭ್ಯಗಳ ಕೊರತೆ ಹಾಗೂ ಸಕಾಲಕ್ಕೆ ಆ್ಯಂಬುಲೆನ್ಸ್ ಸೌಲಭ್ಯ ಸಿಗದಿರುವುದೇ ರೋಗಿ ಸಾವಿಗೆ ಕಾರಣ. ಅಲ್ಲದೆ, ವೈದ್ಯರ ನಿರ್ಲಕ್ಷ್ಯದಿಂದ ಒಂದೇ ವಾರದಲ್ಲಿ ಮೂವರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು. 

ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ವಾರದಲ್ಲಿ ಮೂವರು ರೋಗಿಗಳು ಮೃತಪಟ್ಟಿರುವ ಹೊರತಾಗಿಯೂ, ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸುವ ಗೋಜಿಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಏನಿದು ಘಟನೆ?: ಭಾನುವಾರ ನಡೆದ ಮುಂಗನಹಳ್ಳಿ ಹೋಬಳಿಯ ಸೋಮಾಕಲಹಳ್ಳಿ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ, ಅವರನ್ನು ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ, ಅವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಚಿಂತಾಮಣಿ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಆಸ್ಪತ್ರೆ ಮಾಡಲಿಲ್ಲ. ಇದರಿಂದಾಗಿ ರೋಗಿ ಮೃತಪಟ್ಟಿದ್ದಾನೆ ಎಂಬುದು ಪ್ರತಿಭಟನಕಾರರ ಆರೋಪ. 

ಮೃತ ವ್ಯಕ್ತಿಯನ್ನು ಶ್ರೀನಿವಾಸಪುರದ ನಿವಾಸಿ ಎಂದು ಗುರುತಿಸಲಾಗಿದೆ. ಇದಾದ ಬಳಿಕ ಚಿಕಿತ್ಸೆಗಾಗಿ ಬಂದಿದ್ದ ಸೀತಂಪಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಚಿಕಿತ್ಸೆ ಸಿಗದ ಕಾರಣ ಅವರೂ ಸಹ ಮೃತಪಟ್ಟಿದ್ದಾರೆ. ಅಲ್ಲದೆ, ಸೋಮವಾರ ಬಟ್ಲಹಳ್ಳಿಯಿಂದ ಕೇವಲ 4 ಕಿ.ಮೀ ದೂರದ ಸುಣ್ಣಪ್ಪಕುಂಟ ಗ್ರಾಮದ ರೈತ ಅಶ್ವತ್ಥ್ ರೆಡ್ಡಿ (48) ಅವರಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಾಗಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಬಟ್ಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಐವರು ವೈದ್ಯರಿದ್ದಾರೆ. ಆದರೆ, ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಒಬ್ಬರೇ ಒಬ್ಬ ವೈದ್ಯ ಇರುವುದಿಲ್ಲ. ಹಗಲು ಹೊತ್ತಿನಲ್ಲಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ತಮಗಿಷ್ಟ ಬಂದಂತೆ ವೈದ್ಯರು ಆಸ್ಪತ್ರೆಗೆ ಬಂದು, ಹೋಗುತ್ತಾರೆ. ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಪರಿಕರಗಳು, ಔಷಧಗಳೇ ಇಲ್ಲ. ಹೀಗಾಗಿ, ಔಷಧೋಪಚಾರಗಳಿಗಾಗಿ ಚೀಟಿ ಬರೆದುಕೊಡುತ್ತಾರೆ ಎಂದು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.