ADVERTISEMENT

ಕುಡಿಯುವ ನೀರಿನ ಸಮಸ್ಯೆಗೆ ನಿಗಾವಹಿಸಿ

ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 17:28 IST
Last Updated 28 ಮೇ 2020, 17:28 IST
ಸಾಮಾನ್ಯ ಸಭೆಯಲ್ಲಿ ‌ಭಾಗವಹಿಸಿದ್ದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಅಧಿಕಾರಿಗಳು
ಸಾಮಾನ್ಯ ಸಭೆಯಲ್ಲಿ ‌ಭಾಗವಹಿಸಿದ್ದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಅಧಿಕಾರಿಗಳು   

ಗೌರಿಬಿದನೂರು: ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಕೊರತೆ ಬಾರದಂತೆ ನೋಡಿಕೊಳ್ಳಿ. ಸುಮಾರು 22 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವ ಮಾಹಿತಿ ಇದ್ದು, ಆ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಬೇಕಾಗಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಕೊರೊನಾ ಸೋಂಕು ನಿಯಂತ್ರಿಸಲು ತಾಲ್ಲೂಕಿನ ಅಧಿಕಾರಿ ಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.

ADVERTISEMENT

ಸಭೆಯಲ್ಲಿ ಕೃಷಿ ಅಧಿಕಾರಿ ಎಸ್.ಎನ್‌.ಮಂಜುನಾಥ್ ಮಾತನಾಡಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಓ.ರತ್ನಮ್ಮ ಮಾತನಾಡಿ, ಕೊರೊನಾ ಸೋಂಕು ತಾಲ್ಲೂಕಿನಲ್ಲಿ ಸಂಪೂರ್ಣ ಹತೋಟಿಯಲ್ಲಿದೆ. ಪ್ರಸ್ತುತ ಕ್ವಾರಂಟೈನ್‍ನಲ್ಲಿ ಸುಮಾರು 130 ಮಂದಿ ಇದ್ದು, 77 ಜನ ಗುಣಮುಖರಾಗುವುದು ಖಚಿತವಾಗಿದೆ. ಕೊರೊನಾ ಸೋಂಕು ನಿವಾರಣೆಗೆ ಆಯುಷ್ಮಾನ್ ಚೂರ್ಣ ಬಳಸಬೇಕು. ಇದನ್ನು ಸೇವಿಸಿದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಚೂರ್ಣ ವಿತರಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಲೋಕೇಶ್, ಉಪಾಧ್ಯಕ್ಷೆ ರತ್ನಮ್ಮ, ನಾರಪ್ಪರೆಡ್ಡಿ, ರಾಮಬಾಬು, ನರಸಿಂಹಮೂರ್ತಿ, ಎನ್‌.ಮುನಿರಾಜು, ರವಿಕುಮಾರ್, ಮುರಳಿಧರ್, ಮಹದೇವಸ್ವಾಮಿ ಭಾಗವಹಿಸಿದ್ದರು.

ಮಿಡತೆ ಹಾವಳಿ; ಶಾಸಕ ಆತಂಕ

ಕೋಲಾರಕ್ಕೂ ಮಿಡತೆ ಹಾವಳಿ ಬಂದಿದ್ದು, ಸ್ವತಃ ಶಾಸಕರು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯಿಂದ ಈ ಬಗ್ಗೆ ಮಾಹಿತಿ ಪಡೆದ ಶಾಸಕರು, ‘ಮಿಡತೆ ಹಾವಳಿ ಎದುರಿಸುವ ಬಗ್ಗೆ ಅಧಿಕಾರಿಗಳು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ, ಮಿಡತೆ ಹಾವಳಿ ನಿಯಂತ್ರಣ ಅಸಾಧ್ಯ. ಮರ ಗಿಡ ಮಾತ್ರವಲ್ಲದೆ ವಿದ್ಯುತ್ ಕಂಬಗಳನ್ನು ಕೂಡ ಹತ್ತಿ ಕೃಷಿ ಬೆಳೆಯನ್ನು ನಾಶಪಡಿಸುತ್ತವೆ. ಮಿಡತೆ ರೈತರ ಪಾಲಿಗೆ ಕೊರೊನಾ ಸೋಂಕಿಗಿಂತ ಅಪಾಯವಾದದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ತಜ್ಞರ ಸಲಹೆ ಪಡೆದು ಅವು ತಾಲ್ಲೂಕಿಗೆ ಬರದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.