ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಶಶಿಕಲಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾಮಸಭೆ ನಡೆಯಿತು.
ಗ್ರಾಮ ಪಂಚಾಯಿತಿಯಿಂದ ಆರೋಗ್ಯ, ಪೊಲೀಸ್, ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಯನ್ನು ಪೋರ್ಟಲ್‌ನಲ್ಲಿ ನಮೂದಿಸಲಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ವಿವಿಧ ಇಲಾಖೆಗಳಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತ ಮಾಹಿತಿ ಬಗ್ಗೆ ಚರ್ಚಿಸಲಾಯಿತು. ಹಳ್ಳಿವಾರು ಎಷ್ಟು ಪಡಿತರ ಚೀಟಿ, ಬಿಪಿಎಲ್ ಚೀಟಿಗಳು, ಎಪಿಎಲ್, ಅಂತ್ಯೋದಯ ಚೀಟಿಗಳ ಪೈಕಿ ಎಷ್ಟು ಮಂದಿ ಫಲಾನುಭವಿಗಳು ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಸಭೆಗೆ ತಿಳಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ಎಷ್ಟು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ ಎಂಬ ಬಗ್ಗೆಯೂ ಚರ್ಚಿಸಲಾಯಿತು. ಎಷ್ಟು ಮಂದಿ ಪಿಂಚಣಿ ಪಡೆಯುತ್ತಿದ್ದಾರೆ ಮತ್ತು ಎಷ್ಟು ಮಂದಿ ಪಿಂಚಣಿಗೆ ಅನರ್ಹರಾಗಿದ್ದಾರೆ. ಪಿಂಚಣಿಗಾಗಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಸೇರಿದಂತೆ ವಿವಿಧ ಮಾಹಿತಿಗಳ ಚರ್ಚೆ ನಡೆಯಿತು.
ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಕೊಳಾಯಿಗೆ ಎಷ್ಟು ನೀರಿನ ಶುಲ್ಕ ವಿಧಿಸಬೇಕು ಎಂಬ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ತಾಯಿ, ಮಗುವಿನ ಮರಣ ಸಂಭವಿಸಿಲ್ಲ. ಗಂಡಾಂತರ ಮಹಿಳೆಯರಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ 36 ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲೇ ಆಗಿವೆ. ತಾಯಿ ಮತ್ತು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಅಧ್ಯಕ್ಷೆ ಶಶಿಕಲಾ ರಮೇಶ್ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್, ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸರೆಡ್ಡಿ, ಎಂ.ಜೆ.ಶ್ರೀನಿವಾಸ್, ದೇವರಾಜ್, ನಾರಾಐಣಸ್ವಾಮಿ, ಕಮಲಮ್ಮ, ಶೋಭಾ, ಗ್ರಾಮ ಆಡಳಿತ ಅಧಿಕಾರಿ ಸುಜ್ಞಾನಮೂರ್ತಿ, ಪಿಡಿಒ ಕೆ.ವಿ.ಶಾರದಾ ಹಾಜರಿದ್ದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗಳನ್ನು ಹೆಚ್ಚಿಸಿಕೊಳ್ಳಲು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶ್ರಮಿಸಬೇಕು. ಬಿಸಿಯೂಟ ಗುಣಮಟ್ಟದಲ್ಲಿರಬೇಕು ಮಕ್ಕಳಿಂದ ಶೌಚಾಲಯಗಳನ್ನು ಸ್ವಚ್ಚಗೊಳಿಸುವಂತಹ ಪ್ರಯತ್ನಕ್ಕೆ ಕೈ ಹಾಕಬಾರದು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ಮಕ್ಕಳಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಲಾಯಿತು. ಆಶಾ ಕಾರ್ಯಕರ್ತೆಯರು ಮಳೆಗಾಲದಲ್ಲಿ ಬರಬಹುದಾದ ರೋಗಗಳ ಕುರಿತು ಸಾರ್ವಜನಿಕರಿಗೆ ಅಗತ್ಯವಾಗಿರುವ ಅರಿವು ಮೂಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.