ADVERTISEMENT

ಚಿಕ್ಕಬಳ್ಳಾಪುರ | ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಪೂರಕ: ಜಿಲ್ಲಾಧಿಕಾರಿ ಭಾಸ್ಕರ್

ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಭಾಸ್ಕರ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:08 IST
Last Updated 8 ಜನವರಿ 2026, 6:08 IST
ಚಿಕ್ಕಬಳ್ಳಾಪುರದಲ್ಲಿ ಸಿರಿಧಾನ್ಯಗಳ ನಡಿಗೆಯಲ್ಲಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಜ್ಜೆ ಹಾಕಿದರು
ಚಿಕ್ಕಬಳ್ಳಾಪುರದಲ್ಲಿ ಸಿರಿಧಾನ್ಯಗಳ ನಡಿಗೆಯಲ್ಲಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಜ್ಜೆ ಹಾಕಿದರು   

ಚಿಕ್ಕಬಳ್ಳಾಪುರ: ಪ್ರತಿಯೊಬ್ಬರು ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡುವುದು ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳು ಪೂರಕ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ತಿಳಿಸಿದರು.

ನಗರದ  ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕೃಷಿ ಇಲಾಖೆ ಬುಧವಾರ ಆಯೋಜಿಸಿದ್ದ ‘ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ’ ಕಾರ್ಯಕ್ರಮದ ಪ್ರಯುಕ್ತ ಸಿರಿಧಾನ್ಯಗಳ ಮಹತ್ವ ಸಾರುವ ಜಾಗೃತಿ ಕರಪತ್ರಗಳು ಮತ್ತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. ನಂತರ ಜಾಗೃತಿ ನಡಿಗೆ ಜಾಥಾಗೆ ಹಸಿರು ನಿಶಾನೆ ತೋರಿ ಮಾತನಾಡಿದರು.

ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಸೇವನೆ ಕುರಿತು ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ನಡಿಗೆ ಆಯೋಜಿಸಲಾಗಿದೆ. ಸಿರಿಧಾನ್ಯ ಬೆಳೆಯಲು ರೈತರು ಹೆಚ್ಚು ಒಲವು ತೋರಬೇಕು. ಸಿರಿಧಾನ್ಯಗಳು ಪರಿಸರ ಸ್ನೇಹಿಯಾಗಿದ್ದು ಮಳೆ ಆಶ್ರಿತ ಪ್ರದೇಶಗಳಲ್ಲಿ ಕಡಿಮೆ ನೀರಿನ ಉಪಯೋಗದಲ್ಲಿ ಬೆಳೆಯಬಹುದು ಎಂದರು.

ADVERTISEMENT

ಮನುಷ್ಯನಿಗೆ ಸಂಪತ್ತಿಗಿಂತ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಕಳೆದುಕೊಂಡರೆ ಜೀವನವೇ ವ್ಯರ್ಥ. ಪ್ರತಿದಿನ ಯಾರು ಸಿರಿಧಾನ್ಯಗಳನ್ನು ಸೇವಿಸುವರೊ ಅವರ ದೇಹ ಮತ್ತು ಮನಸ್ಸು ಸದೃಢವಾಗಿರಲಿದೆ ಎಂದು ಹೇಳಿದರು.

ರಾಗಿ, ನವಣೆ, ಹಾರಕ, ಸಾಮೆ, ನೆಲ್ಲಕ್ಕಿ, ಬರುಗು, ಕೊರಲೆ, ಊದಲು, ಸಜ್ಜೆ ಮತ್ತು ಜೋಳ ಹೀಗೆ ಹಲವಾರು ಬಗೆಯ ಸಿರಿಧಾನ್ಯಗಳಲ್ಲಿನ ಪೌಷ್ಟಿಕಾಂಶಗಳಿವೆ. ಉತ್ತಮ ಆರೋಗ್ಯ ನಿರ್ವಹಣೆಗೆ ಸಹಕಾರಿಯಾಗಿವೆ. ಫೈಬರ್ ಯುಕ್ತ  ಮತ್ತು ಆರೋಗ್ಯಯುಕ್ತ ಖನಿಜಾಂಶಗಳಿರುವಂತಹ ಸಿರಿಧಾನ್ಯಗಳ ಸೇವನೆಯನ್ನು ಬಹುತೇಕ ಜನರು ಆಹಾರದ ಭಾಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಸ್. ಅಬಿದ್ ಮಾತನಾಡಿ, ಪ್ರತಿಯೊಬ್ಬರು ದಿನನಿತ್ಯ ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇವಿಸಿದರೆ ಉತ್ತಮ ಆರೋಗ್ಯ ಹೊಂದಬಹುದು. ಪ್ರತಿ ವರ್ಷದಂತೆ ಈ ಭಾರಿಯು ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆ ಎಂಬ ಕಾರ್ಯಕ್ರಮವನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇವುಗಳ ಬಳಕೆಯಿಂದ ಮಧುಮೇಹ, ಹೃದ್ರೋಗ, ಕರುಳುಬೇನೆ ಹಾಗೂ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದು. ಸಿರಿಧಾನ್ಯಗಳು ರೋಗನಿರೋಧಕ ಶಕ್ತಿ ನೀಡುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಜಾಗೃತಿಗೀತೆಗಳಿಗೆ ಗಣ್ಯರು ನೃತ್ಯ ಮಾಡಿದರು. ಪ್ರಗತಿಪರ ಸಿರಿಧಾನ್ಯ ಬೆಳೆಗಾರರು, ಸಂಸ್ಕರಣಾ ಘಟಕಗಳ ಉತ್ಪಾದಕರು ಮಾರುಕಟ್ಟೆದಾರರು, ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಹಶೀಲ್ದಾರ್ ರಶ್ಮಿ, ಕೃಷಿ ಉಪನಿರ್ದೇಶಕಿ ಜಿ. ದೀಪಶ್ರೀ, ಜಿ.ಆರ್.ಭವ್ಯರಾಣಿ, ಸಹಾಯಕ ಕೃಷಿ ನಿರ್ದೇಶಕರು, ರೈತರ ಸಂಘದ ಮುಖಂಡರು, ಚೈತನ್ಯ ಯೋಗ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ರಾಗಿ ತಿಂದವರು

ನಿರೋಗಿ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ‘ಊದಲು ತಿಂದವರಿಗೆ ಉಬ್ಬಸ ಇಲ್ಲ’ ‘ಬರಗಾಲದ ಮಿತ್ರರು ಸಿರಿಧಾನ್ಯಗಳು’ ‘ಜೋಳ ತಿಂದವರು ತೋಳದ ಹಾಗೆ’ ‘ನವಣೆ ತಿಂದವರು ಬುದ್ಧಿವಂತರಾಗುವರು ‘ಸಿರಿಧಾನ್ಯ ಪ್ರತಿ ಧಾನ್ಯದಲ್ಲೂ ಉತ್ಕೃಷ್ಟ’ ‘ಬರಗು ಇದ್ರೆ ಬರಗಾಲದಲ್ಲೂ ಬದುಕು’ ‘ಮಣ್ಣಿನ ಪೋಷಣೆ ಆರೋಗ್ಯದ ರಕ್ಷಣೆ’ ‘ಹಾರಕ ತಿಂದವರು ಹಾರಾಡ್ತಾ ಹೋದ್ರು’ ‘ಜೋಳ ತಿಂದವರು ಬಲಿಷ್ಠರಾಗುವರು ರಾಗಿ ತಿಂದವರು ನಿರೋಗಿಯಾಗುವರು’ ಎಂಬ ಘೋಷಣೆಗಳು ಸಾರ್ವಜನಿಕರ ಗಮನ ಸೆಳೆದವು. ನಡಿಗೆ ಕಾರ್ಯಕ್ರಮವು ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಿ ಬಿ.ಬಿ. ರೋಡ್ ಬಜಾರ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.