
ಚಿಂತಾಮಣಿ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಜಿ.ಪ್ರಭು ಅವರೊಂದಿಗೆ ಸೋಮವಾರ ನಗರದ ಅಜಾದ್ ಚೌಕದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದರು.
ಜನರ ಉಪಯೋಗಕ್ಕಾಗಿ ದೂರದೃಷ್ಟಿಯಿಂದ ನಗರದ ಎಂ.ಜಿ.ರಸ್ತೆಯಿಂದ ರೈಲ್ವೆ ನಿಲ್ದಾಣ ರಸ್ತೆ ವಿಸ್ತರಣೆ. ಬಂಬೂ ಬಜಾರ್ ರಸ್ತೆ, ರಾಮಕುಂಟೆಯಿಂದ ಬರುವ ರಸ್ತೆಗಳ ಪರಿಶೀಲನೆ ನಡೆಸಿ ಅಗಲೀಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ವರದಿ ಸಲ್ಲಿಸಲು ಸೂಚಿಸಿದರು.
ರೈಲ್ವೆ ನಿಲ್ದಾಣಕ್ಕೆ ಸಂಚರಿಸುವ ಜನಸಂಖ್ಯೆ ಹೆಚ್ಚಾಗಿದೆ. ಭವಿಷ್ಯದಲ್ಲಿ ರೈಲುಗಳ ಓಡಾಟದ ಸಂಖ್ಯೆ ಹೆಚ್ಚಾಗುತ್ತದೆ. ಗೂಡ್ಸ್ ರೈಲುಗಳು ಸಂಚರಿಸಲಿವೆ. ಆದರೆ, ರೈಲ್ವೆ ನಿಲ್ದಾಣಕ್ಕೆ ಹೋಗಿಬರಲು ರಸ್ತೆ ತುಂಬಾ ಕಿರಿದಾಗಿದೆ. 12-13 ವರ್ಷಗಳ ಹಿಂದೆಯೇ ರೈಲ್ವೆ ನಿಲ್ದಾಣಕ್ಕೆ ನೇರ ರಸ್ತೆಯ ಚಿಂತನೆ ನಡೆಸಿದ್ದೆ. ಅಂದಿನ ಜಿಲ್ಲಾಧಿಕಾರಿ ಎನ್.ಮಂಜುಳಾ ಅವರನ್ನು ಕರೆದುಕೊಂಡು ಬಂದು ವೀಕ್ಷಣೆ ಮಾಡಿಸಿ, ಸೂಕ್ತ ಕ್ರಮಕೈಗೊಳ್ಳಲು ಮನವಿ ಮಾಡಿದ್ದೆ ಎಂದು ಹೇಳಿದರು.
ಯೋಜನೆ ಕಾರ್ಯರೂಪಕ್ಕೆ ಬರದೆ ಕಳೆದ 10 ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಈಗ ನಗರೋತ್ಥಾನ ಯೋಜನೆಯಲ್ಲಿ ಅನುದಾನವನ್ನು ನೀಡಲಾಗಿದೆ. ಪರ್ಯಾಯ ರಸ್ತೆಯನ್ನು ಮಾಡಲು ಈ ಭಾಗದ ರೈತರೊಂದಿಗೂ ಚರ್ಚೆ ಮಾಡಲಾಗಿದೆ. ಅವರು ಸಹ ಸಮ್ಮತಿಸಿದ್ದಾರೆ. ಈ ಭಾಗದಲ್ಲಿ ರೈತರಿಗೂ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ. ರಸ್ತೆಯಾದರೆ ಹೆಚ್ಚು ಅಭಿವೃದ್ಧಿಯಾಗಿ ಅವರ ಜಮೀನುಗಳ ಬೆಲೆಯೂ ಜಾಸ್ತಿಯಾಗಲಿದೆ ಎಂದರು.
ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಚರ್ಚೆ ನಡೆಸಿ ವರದಿ ತಯಾರಿಸಿದ ನಂತರ ಸಾರ್ವಜನಿಕರ ಗಮನಕ್ಕೂ ತರಲಾಗುವುದು. ನಗರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉತ್ತಮ ರಸ್ತೆ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ.ಪ್ರಭು, ತಹಶೀಲ್ದಾರ್ ಸುದರ್ಶನ ಯಾದವ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೌರಾಯುಕ್ತ ಜಿ.ಎನ್.ಚಲಪತಿ ಮತ್ತಿತರ ಅಧಿಕಾರಿಗಳು, ಎಂಜನಿಯರ್‌ಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.