
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ‘ಕಂದಾಯ ಗ್ರಾಮ ಅಭಿಯಾನ’ದಡಿ 30 ಸಾವಿರ ಹಕ್ಕುಪತ್ರಗಳನ್ನು ಕೊಡಲು ಗುರಿ ಇದೆ. ಕಂದಾಯ ಗ್ರಾಮಗಳ ಹಕ್ಕುಪತ್ರಗಳು, ಪೋಡಿ, ಪೌತಿ ಖಾತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಇಲ್ಲಿನ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.27ರಂದು ಚಿಕ್ಕಬಳ್ಳಾಪುರದಲ್ಲಿ ಈ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಆಲೋಚಿಸಿದ್ದೆವು. ಆದರೆ ಅಂದು ಸಚಿವರಿಗೆ ಬೇರೆ ಕಾರ್ಯಕ್ರಮಗಳು ಇವೆ. ಆದ್ದರಿಂದ ದಿನ ನಿಗದಿ ಮಾಡಿಕೊಂಡು ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಕಂದಾಯ ಗ್ರಾಮ ಅಭಿಯಾನದಡಿ ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ ಈ ಅಭಿಯಾನ ಕರಾರುವಕ್ಕಾಗಿ ಮಾಡಲಾಗುತ್ತಿದೆ. ಕನಿಷ್ಠ 10 ಮನೆಗಳಿರುವ ದಾಖಲೆ ರಹಿತ ಜನವಸತಿ ಪ್ರದೇಶ ಗುರುತಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ 1,522 ಮೂಲ ಕಂದಾಯ ಗ್ರಾಮಗಳಿವೆ. ಈ ಪೈಕಿ 344 ಗ್ರಾಮಗಳನ್ನು ಕಂದಾಯ ಗ್ರಾಮ, ಉಪಗ್ರಾಮ, ಗ್ರಾಮಠಾಣಾ ವಿಸ್ತರಣೆ ಎಂದು ಗುರುತಿಸಲಾಗಿದೆ. ಈ ಪ್ರದೇಶ ಹೊರತುಪಡಿಸಿ ಬಾಕಿಯುಳ್ಳ ದಾಖಲೆ ರಹಿತ ಜನವಸತಿಗಳನ್ನು ಗುರುತಿಸಲಾಗುತ್ತಿದೆ. ದಾಖಲೆ ಇಲ್ಲದೆ ವಾಸಿಸುತ್ತಿರುವ ನಿವಾಸಿಗಳಿಗೆ 30,000 ಹಕ್ಕುಪತ್ರ ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.
2,790 ದರಖಾಸ್ತು ಪೋಡಿ, 1,956 ಕಂದಾಯ ಗ್ರಾಮಗಳ ಹಕ್ಕುಪತ್ರಗಳು, 4,858 ಪೌತಿ ಖಾತೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ 3,200 ಫಲಾನುಭವಿ ಗಳಿಗೆ ಸೌಲಭ್ಯ ದೊರಕಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.
ಪ್ರಸ್ತುತ 10,000 ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸವಲತ್ತು ನೀಡಲು ಗುರಿ ಹೊಂದಲಾಗಿದೆ. ಸಂಬಂಧಪಟ್ಟ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ಕೊಟ್ಟು ಅಭಿಯಾನದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಜಿಲ್ಲೆಯ ತಾಲ್ಲೂಕು ಕಚೇರಿಗಳಲ್ಲಿ 1.9 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಈಗಾಗಲೇ ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಈ ಪೈಕಿ 2 ಲಕ್ಷ ದಾಖಲೆಗಳನ್ನು ಸಾರ್ವಜನಿಕರು ಆನ್‌ಲೈನ್ ಮೂಲಕ ದೃಢೀಕೃತ ದಾಖಲೆಗಳನ್ನು ಹಣ ಪಾವತಿಸಿ ಪಡೆಯಬಹುದು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಯಿಂದ ಮುಂದಿನ ವರ್ಷದ ವೇಳೆಗೆ ಜಿಲ್ಲೆಗೆ ನೀರು ಲಭ್ಯವಾಗುವ ಸಾಧ್ಯತೆ ಇದೆ. ಯೋಜನೆಯ ಕಾಮಗಾರಿ ಗೌರಿಬಿದನೂರಿನಲ್ಲಿ ಪೂರ್ಣವಾಗುತ್ತಿದೆ. ಬಜೆಟ್‌ನಲ್ಲಿ ಯೋಜನೆಗೆ ಹಣ ದೊರೆಯುತ್ತದೆ ಎಂದರು.
ನಂದಿಬೆಟ್ಟದಲ್ಲಿ ಲೋಯರ್ ಟರ್ಮಿನಲ್‌ನಲ್ಲಿ ರೋಪ್ ವೇ ಕಾಮಗಾರಿಯು ನಡೆಯುತ್ತಿದೆ. ಅಪ್ಪರ್ ಟರ್ಮಿನಲ್‌ನಲ್ಲಿ ಕೆಲಸ ಆರಂಭವಾಗಬೇಕಿದೆ. ಇಲ್ಲಿ ಕಾಮಗಾರಿ ಆರಂಭವಾದರೆ ವಾಹನ ನಿಲುಗಡೆ ಸಾಧ್ಯವಿಲ್ಲ. ಆದ್ದರಿಂದ ಕುಪ್ಪಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಜಾಗ ಗುರುತಿಸಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರನ್ನು ಬಸ್‌ಗಳಲ್ಲಿ ಗಿರಿಧಾಮಕ್ಕೆ ಕರೆದೊಯ್ಯಲಾಗುತ್ತದೆ ಎಂದು ಹೇಳಿದರು.
ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಮಂಡಳಿ ರಚಿಸಿ ಎನ್ನುವ ಸುಪ್ರೀಂಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ದಕ್ಷಿಣ ಪಿನಾಕಿನಿ ಸುಮಾರು ವರ್ಷದ ಸಮಸ್ಯೆ. ಯರಗೋಳ್ ನೀರಾವರಿ ಯೋಜನೆ ವೇಳೆ ತಮಿಳುನಾಡು ತಕರಾರು ತೆಗೆದಿತ್ತು. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಹಿನ್ನಡೆ ಆಯಿತು ಎಂದು ಸಚಿವರು ಹೇಳಿದರು.
ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ವೈ.ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಪಾಲ್ಗೊಂಡಿದ್ದರು.
‘ಚಿಮುಲ್ ಅಧ್ಯಕ್ಷ ಸ್ಥಾನ; ಚರ್ಚಿಸಿ ತೀರ್ಮಾನ’
ಚಿಮುಲ್ ಚುನಾವಣೆಯಲ್ಲಿ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎರಡು ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆವು. ಎರಡು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆವು. ಜೊತೆಯಲ್ಲಿ ಇದ್ದವರೇ ಮತ ನೀಡಲಿಲ್ಲ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು. ಚಿಮುಲ್ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
‘ಚಿಕ್ಕಬಳ್ಳಾಪುರದಲ್ಲಿ ಅವ್ಯವಹಾರ ಅಧ್ವಾನ; ಪರಿಶೀಲನೆಗೆ ಸೂಚನೆ’
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಖಾತೆಗೆ ಅಲೆಯಬೇಕು. ಲಂಚ ನೀಡಬೇಕು ಎನ್ನುವ ಆರೋಪಗಳಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸಚಿವರು ಸೂಚಿಸಿದರು. ಐಡಿಎಸ್‌ಎಂಟಿ ಬಡಾವಣೆಯಲ್ಲಿನ ನಿವೇಶನದ ಅವ್ಯವಹಾರ ಚಿಕ್ಕಬಳ್ಳಾಪುರ ಸಂತೆ ಮಾರುಕಟ್ಟೆಯಲ್ಲಿ ಹರಾಜು ನಡೆಸಿರುವ ಮಳಿಗೆಗಳು ಮತ್ತು ಆ ಮಳಿಗೆಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿರುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲ ಕಡೆಗಳಲ್ಲಿ ನಗರೋತ್ಥಾನ ಕಾಮಗಾರಿಗಳು ನಡೆಯುತ್ತಿವೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆ ವಿಚಾರದಲ್ಲಿ ಗೊಂದಲಗಳು ಇವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ಕೇಂದ್ರ ಸಚಿವರ ವಿರುದ್ಧ ಅಸಮಾಧಾನ
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ವಿ.ಸೋಮಣ್ಣ ಅವರು ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ವಿಚಾರವಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಗೆ ಮುನ್ನ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಯೋಜನೆಗಳಿಗೆ 24 ಗಂಟೆಗಳಲ್ಲಿ ಅನುಮತಿ ಕೊಡಿಸುವೆ ಎಂದಿದ್ದರು. ಆದರೆ ಒಂದೂ ಮುಕ್ಕಾಲು ವರ್ಷವಾದರೂ ಸುಮ್ಮನಿದ್ದಾರೆ ಎಂದು ಹರಿಹಾಯ್ದರು. ‘ಸೋಮಣ್ಣ ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಯಾವ ಯಾವ ಸಂದರ್ಭದಲ್ಲಿ ಅವರು ಯಾರ ಜೊತೆ ರಾಜಿ ಮಾಡಿಕೊಳ್ಳುವರು ವಿರುದ್ಧವಿರುವರು ಎನ್ನುವುದು ನನಗೆ ಗೊತ್ತು’ ಎಂದರು. ಸಂಸದ ತೇಜಸ್ವಿ ಸೂರ್ಯ ಸರ್ಕಾರವನ್ನು ಖಾಲಿ ಡಬ್ಬ ಎಂದಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಿಂದ ರಾಜಕೀಯಕ್ಕೆ ಬಂದವರು. ಬೆಂಗಳೂರಿನ ಮೆಟ್ರೊ ದರ ನಿಗದಿ ಮಾಡುವವರು ಯಾರು ಎನ್ನುವುದು ತಿಳಿದಿಲ್ಲವೇ ಎಂದು ಕುಟುಕಿದರು. ಜಲಜೀವನ ಮಿಷನ್ ಯೋಜನೆಯ ಹಣಕ್ಕಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಹೋರಾಟ ಮಾಡುತ್ತಿವೆ. ಖಾಲಿ ಟ್ರಂಕ್ ಯಾರು ಎನ್ನುವುದು ಈ ಮೂಲಕ ದೇಶಕ್ಕೆ ಗೊತ್ತಾಗಿದೆ ಎಂದರು.
‘ರಾಜೀವ್ ಗೌಡರದ್ದೇ ಧ್ವನಿ’
‘ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ’ ಎನ್ನುವ ಶಿಡ್ಲಘಟ್ಟದ ಮುಖಂಡ ರಾಜೀವ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು. ‘ಪೌರಾಯುಕ್ತೆಯ ಜೊತೆ ಮಾತನಾಡಿರುವುದು ರಾಜೀವ್ ಗೌಡ ಅವರದ್ದೇ ಧ್ವನಿ. ತನಿಖೆ ನಡೆಯುತ್ತಿದೆ. ಅವರಿಗೆ ಅನುಮಾನಗಳು ಇದ್ದರೆ ಪೊರೆನ್ಸಿಕ್‌ಗೆ ಕೊಡಲಿ. ಇಂತಹ ಹೇಳಿಕೆಗಳು ಸಹಜ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.