ADVERTISEMENT

ಮಕ್ಕಳು ಮೊಬೈಲ್ ಮೃಗದ ಕೈಗೆ ಸಿಲುಕದಿರಲಿ: ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ

‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:32 IST
Last Updated 25 ಜನವರಿ 2026, 5:32 IST
ಕೋಟಿಗಾನಹಳ್ಳಿ ರಾಮಯ್ಯ
ಕೋಟಿಗಾನಹಳ್ಳಿ ರಾಮಯ್ಯ   

ಚಿಕ್ಕಬಳ್ಳಾಪುರ: ‘ಮಕ್ಕಳು ಮೊಬೈಲ್, ಸ್ಮಾರ್ಟ್‌ಫೋನ್‌ಗಳೆಂಬ ಮೃಗದ ಕೈಗೆ ಸಿಲುಕಬಾರದು. ಸಿಲುಕಿದರೆ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯ’ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ನಗರದಲ್ಲಿ ಸಕಲ ರಂಗಹೆಜ್ಜೆ ಸಂಸ್ಥೆಯು ಶನಿವಾರದಿಂದ ಹಮ್ಮಿಕೊಂಡಿರುವ ‘ಸುಗ್ಗಿ ನಾಟಕೋತ್ಸವ’ದಲ್ಲಿ ‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ನಮ್ಮ ಮಕ್ಕಳು ಏನು ಕಲಿಯಬೇಕು, ಪಠ್ಯದ ಮೂಲಕ ಏನು ಕಲಿಯುತ್ತಿದ್ದಾರೆ. ಈ ವಿಚಾರಗಳು ಅವರನ್ನು ಬೌದ್ಧಿಕ ಉನ್ನತಿಗೆ ಕೊಂಡೊಯ್ಯುತ್ತದೆಯೇ ಎನ್ನುವುದು ಪೋಷಕರಿಗೆ ಗೊತ್ತಿಲ್ಲ ಎಂದರು.

ADVERTISEMENT

ನಮ್ಮ ಮಕ್ಕಳು ಓದುವ ಪಠ್ಯಗಳು ವಿಷಯ ತಜ್ಞರಿಂದ ನಿರ್ಧಾರ ಆಗುತ್ತವೆ. ಇದರಿಂದ ಮಗುವಿನ ಒಳ ಜಗತ್ತಿನ ತುಳಿತವಾಗುತ್ತಿದೆ. ಈ ಬಗ್ಗೆ ತಂದೆ ತಾಯಿ ಯೋಚಿಸುವುದಿಲ್ಲ. ಮಕ್ಕಳು ಶೇ 75, ಶೇ 80ರಷ್ಟು ಅಂಕಗಳಿಸಬೇಕು ಎನ್ನುವುದರತ್ತಲೇ ಪೋಷಕರು ದೃಷ್ಟಿ ಹರಿಸುವರು ಎಂದರು.

ಚಿತ್ರಕಲೆ, ರಂಗಕಲೆ ಹೀಗೆ ಕಲೆಗಳು ಮಕ್ಕಳ ಒಳಗಿನ ಮನಸ್ಸನ್ನು ತೆರೆದಿಡುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಉಸಿರಾಡುವ ಚೈತನ್ಯ ಕೊಡುತ್ತವೆ. ಒಳ್ಳೆಯ ನಾಟಕ ನೋಡಬೇಕು, ಸಂಗೀತ ಕೇಳಬೇಕು ಎನ್ನುವುದು ನಮ್ಮ ಮನದಲ್ಲಿ ಮೂಡಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.