ADVERTISEMENT

ಮಾತೃಭಾಷೆಯೇ ಜ್ಞಾನಕ್ಕೆ ಆಧಾರ: ಐಐಎಸ್‌ಸಿ ವಿಜ್ಞಾನಿ ಗೌತಮ್ ದೇಸಿರಾಜು

ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:40 IST
Last Updated 13 ಸೆಪ್ಟೆಂಬರ್ 2025, 5:40 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ಚಿಕ್ಕಬಳ್ಳಾಪುರ  ಅಗಲಗುರ್ಕಿ ಬಿಜಿಎಸ್‌ ಇಂಗ್ಲಿಷ್‌ ಶಾಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೆಳೆಕೋಟೆ ಬಿಜಿಎಸ್‌ ಶಾಲೆ ಶಿಕ್ಷಕರಿಗೆ ಬಹುಮಾನ ನೀಡಲಾಯಿತು 
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ಚಿಕ್ಕಬಳ್ಳಾಪುರ  ಅಗಲಗುರ್ಕಿ ಬಿಜಿಎಸ್‌ ಇಂಗ್ಲಿಷ್‌ ಶಾಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೆಳೆಕೋಟೆ ಬಿಜಿಎಸ್‌ ಶಾಲೆ ಶಿಕ್ಷಕರಿಗೆ ಬಹುಮಾನ ನೀಡಲಾಯಿತು    

ಚಿಕ್ಕಬಳ್ಳಾಪುರ: ತಾಯಿ ಭಾಷೆಯು ಎಲ್ಲಾ ಭಾಷೆಗಳ ಮೂಲ. ಪ್ರತಿಯೊಂದು ಜ್ಞಾನಕ್ಕೂ ಆಧಾರ. ಬಾಲ್ಯದಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸರ್ವೆಪಲ್ಲಿ ರಾಧಕೃಷ್ಣನ್‌ ಅವರ ಮೊಮ್ಮಗ ಹಾಗೂ ಐಐಎಸ್‌ಸಿ ವಿಜ್ಞಾನಿ ಗೌತಮ್ ದೇಸಿರಾಜು ತಿಳಿಸಿದರು.

ನಗರದ ಎಸ್‌ಜೆಸಿಐಟಿ ಆವರಣದಲ್ಲಿ ಶುಕ್ರವಾರ ನಡೆದ ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಸಂಸ್ಕೃತಿ ಶಿಕ್ಷಣಕ್ಕಿಂತಲೂ ಉನ್ನತವಾದುದು. ನಮ್ಮ ದೇಶವು ಇಂದಿಗೆ ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳೊಂದಿಗೆ ಹೆಮ್ಮೆಯಿಂದ ಹೆಜ್ಜೆ ಹಾಕುತ್ತಿದೆ. ಗುರುಗಳಾದ ನಾವು ಶಿಸ್ತುಬದ್ಧರಾಗಿದ್ದು, ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ನಮ್ಮ ನಡೆನುಡಿಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ADVERTISEMENT

ದೇವಭಾಷೆಯಾದ ಸಂಸ್ಕೃತವನ್ನು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಕಲಿಯಬೇಕು. ವಿಜ್ಞಾನ ಎಷ್ಟೇ ಬೆಳವಣಿಗೆ ಆದರೂ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳನ್ನು ಮರೆಯಬಾರದು.

ಎಲ್ಲಾ ವೃತ್ತಿರಂಗದವರನ್ನು ಸೃಷ್ಟಿಸುವ ಶಕ್ತಿ ಶಿಕ್ಷಕರಿಗೆ ಇದೆ. ಆದ್ದರಿಂದ ನಿಮ್ಮ ವೃತ್ತಿರಂಗವನ್ನು ಪ್ರೀತಿಸಿ, ಗೌರವಿಸುವ ಮೂಲಕ ಕಾರ್ಯನಿರ್ವಹಿಸಿ. ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಿ ಎಂದು ಕಿವಿಮಾತು ಹೇಳಿದರು.

ತಮ್ಮ ತಾತ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಸರಳತೆ, ಅವರು ಉಪ ರಾಷ್ಟ್ರಪತಿಗಳಾಗಿದ್ದಾಗ ನಡೆಸಿದ ಜೀವನ ಹಾಗೂ ಮೈಸೂರಿನಿಂದ ಕೋಲ್ಕತ್ತಾಗೆ ವರ್ಗಾವಣೆ ಆದಾಗ ವಿದ್ಯಾರ್ಥಿಗಳು ತೋರಿದ ಪ್ರೀತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ, ಗುರುಗಳಾದ ನಾವು ಸಮಾಜ ಸೇವೆಯ ಮಹತ್ವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಉತ್ತಮ ಶಿಕ್ಷಣವನ್ನು ನೀಡಿ, ದೇಶಕ್ಕೆ ಆದರ್ಶ ಪ್ರಜೆಗಳನ್ನು ರೂಪಿಸಬೇಕು. ನಮ್ಮ ಬದ್ಧತೆ, ಶ್ರದ್ಧೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ದೇಶದ ಉನ್ನತಿ ಮತ್ತು ಪ್ರಗತಿಗೆ ದಾರಿ ತೋರಬೇಕು ಎಂದು ತಿಳಿಸಿದರು.

ಶಿಕ್ಷಕ ವೃತ್ತಿಯಿಂದ ಬಂದವರಿಂದ ದೇಶ ಮತ್ತು ಜಗತ್ತಿನಲ್ಲಿಸಾಕಷ್ಟು ಮಹತ್ತರ ಬದಲಾವಣೆಗಳಾಗಿವೆ. ಶಿಕ್ಷಕ ವೃತ್ತಿ ಪವಿತ್ರವಾದುದು. ದೇಶ ಕಟ್ಟುವ ಸಾಮರ್ಥ್ಯ‌ ಶಿಕ್ಷಕರಲ್ಲಿದೆ ಎಂದರು

ಉದಾತ್ತ ಚಿಂತನೆಗಳನ್ನು ಕೇಳುವುದಷ್ಟೇ ಅಲ್ಲ. ಅದಕ್ಕೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳಬೇಕು. ಶಿಕ್ಷಕರು ಉದಾತ್ತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಮಾದರಿ ಆಗಬೇಕು. ಸರಳತೆ ರೂಢಿಸಿಕೊಳ್ಳಬೇಕು  ಎಂದರು.

ಬಿಜಿಎಸ್ ಸಮೂಹ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮ ರೆಡ್ಡಿ, ಎಸ್‌ಜೆಸಿಐಟಿ ಪ್ರಾಂಶುಪಾಲ ಜಿ.ಟಿ.ರಾಜು ಮಾತನಾಡಿದರು.

ಮಂಗಳನಾಥ ಸ್ವಾಮೀಜಿ, ಡಿಡಿಪಿಐ ರಮೇಶ್‌, ಕೆಂಪೇಗೌಡ ಪ್ರತಿಷ್ಠಾನದ ಕೃಷ್ಣಪ್ಪ, ಬಿಜಿಎಸ್‌ ಪಿಯು ಕಾಲೇಜಿನ ಡೀನ್‌ ಮಧುಸೂದನ್‌, ಅಗಲಗುರ್ಕಿ ಬಿಜಿಎಸ್‌ ಇಂಗ್ಲಿಷ್‌ ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಮೋಹನ್‌ಕುಮಾರ್‌, ಬಿಜಿಎಸ್‌ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಶಿಕ್ಷಕರಿಗೆ ನಗದು ಬಹುಮಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಹಾಗೂ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಬಿಜಿಎಸ್‌ ಇಂಗ್ಲಿಷ್‌ ಶಾಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೆಳೆಕೋಟೆ ಬಿಜಿಎಸ್‌ ಶಾಲೆ ಶಿಕ್ಷಕರಿಗೆ ನಗದು ಬಹುಮಾನ ನೀಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.