ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ಮೊದಲ ಆರೋಪಿ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಉಳಿದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಬಾಬು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆ.7ರಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನನ್ನ ಆತ್ಮಹತ್ಯೆಗೆ ಸಂಸದ ಡಾ.ಕೆ.ಸುಧಾಕರ್, ಅವರ ಬೆಂಬಲಿಗ ಚಿಕ್ಕಕಾಡಿಗೇನಹಳ್ಳಿಯ ನಾಗೇಶ್ ಎನ್. ಮತ್ತು ಜಿಲ್ಲಾ ಪಂಚಾಯಿತಿ ಲೆಕ್ಕಶಾಖೆಯ ಎಸ್‌ಡಿಎ ಮಂಜುನಾಥ್ ಕಾರಣ’ ಎಂದು ಡೆತ್‌ನೋಟ್ ಬರೆದಿದ್ದರು.
ಈ ಪ್ರಕರಣದಲ್ಲಿ ಡಾ.ಕೆ.ಸುಧಾಕರ್ ಮೊದಲ ಆರೋಪಿಯಾಗಿದ್ದರೆ ಚಿಕ್ಕಕಾಡಿಗೇನಹಳ್ಳಿ ನಾಗೇಶ್ ಎರಡನೇ ಮತ್ತು ಮಂಜುನಾಥ್ ಮೂರನೇ ಆರೋಪಿ ಆಗಿದ್ದರು. ಈ ಪ್ರಕರಣವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.
ಈ ಪ್ರಕರಣದಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿತ್ತು. ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈಗ ಈ ಇಬ್ಬರಿಗೂ ಜಾಮೀನು ದೊರೆತಿದೆ.
ವಕೀಲರ ಮೂಲಕ ಚಿಕ್ಕಬಳ್ಳಾಪುರದ ನಾಗರಿಕ ಹಕ್ಕು ಜಾರಿ ನಿದೇರ್ಶನಾಲಯ ಪೊಲೀಸ್ ಠಾಣೆಗೆ ನಾಗೇಶ್ ಮತ್ತು ಮಂಜುನಾಥ್ ಹಾಜರಾಗಿ ಜಾಮೀನು ಪತ್ರ ಸಲ್ಲಿಸಿದರು. ಪ್ರತಿ ತಿಂಗಳ ಎರಡನೇ ಭಾನುವಾರ ಖುದ್ದು ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ತೊಂದರೆ ಕೊಡಬಾರದು ಎನ್ನುವ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
‘ನನ್ನ ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಡಾ.ಕೆ.ಸುಧಾಕರ್ ಹೈಕೋರ್ಟ್‌ಗೆ ಇತ್ತೀಚೆಗೆ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಪ್ರಕರಣದ ತನಿಖೆಗೆ ಸಹಕರಿಸಿ’ ಎಂದು ಸುಧಾಕರ್ ಅವರಿಗೆ ನಿರ್ದೇಶಿಸಿತ್ತು.
ಸುಧಾಕರ್ ಪರ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರ ವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಹೈಕೋರ್ಟ್ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತಿಲ್ಲ’ ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.