ADVERTISEMENT

ಉತ್ತರಪ್ರದೇಶದ ಯುವಕನ ಕೊಲೆ: ನಾಲ್ವರು ಆರೋಪಿಗಳ ಬಂಧನ

ಬಾಂಬೆ ಸಲೀಂ ತಂಡದಿಂದ ಉತ್ತರಪ್ರದೇಶದ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 3:29 IST
Last Updated 6 ಅಕ್ಟೋಬರ್ 2020, 3:29 IST
ಕೊಲೆ ಆರೋಪಿಗಳ ಜೊತೆಯಲ್ಲಿ ಎಸ್ ಪಿ ಮಿಥುನ್ ಕುಮಾರ್, ಡಿವೈಎಸ್ ಪಿ ಕೆ.ರವಿಶಂಕರ್, ಸಿಐ ನಯಾಜ್ ಬೇಗ್, ಪಿಎಸ್‌ಐ ಜಿ.ಕೆ.ಸುನೀಲ್ ಕುಮಾರ್ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿ
ಕೊಲೆ ಆರೋಪಿಗಳ ಜೊತೆಯಲ್ಲಿ ಎಸ್ ಪಿ ಮಿಥುನ್ ಕುಮಾರ್, ಡಿವೈಎಸ್ ಪಿ ಕೆ.ರವಿಶಂಕರ್, ಸಿಐ ನಯಾಜ್ ಬೇಗ್, ಪಿಎಸ್‌ಐ ಜಿ.ಕೆ.ಸುನೀಲ್ ಕುಮಾರ್ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿ   

ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಚಿತ್ರಾವತಿ ಬಳಿ ಮಾ.3ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಉತ್ತರಪ್ರದೇಶದ ರಾಜ್ ಕೊಲೆಯಾದ ವ್ಯಕ್ತಿ. ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ, ವಿನೋದ್ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದು, ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಪರಗೋಡು ಚಿತ್ರಾವತಿ ಬಳಿ ಅಪರಿಚಿತ ಯುವಕನನ್ನು ಗಾಯಗೊಳಿಸಿ ಕೊಲೆ ಮಾಡಿದ್ದ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉತ್ತರಪ್ರದೇಶದ ರಾಜ್ ಬೆಂಗಳೂರಿನ ಪೀಣ್ಯಾದ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ರಾಜ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆಯಿಂದ ರೌಡಿ ಬಾಂಬೆ ಸಲೀಂ, ಮಾ.15ರಂದು ತನ್ನ ಪತ್ನಿಯಿಂದ ರಾಜ್‌ಗೆ ಮೊಬೈಲ್ ಕರೆ ಮಾಡಿಸಿ ತಾನು ಕಾರು ಚಾಲಕನಂತೆ ನಟಿಸಿ, ಚಿಕ್ಕಬಳ್ಳಾಪುರ ಆರ್‌ಟಿಒ ಕಚೇರಿ ಹತ್ತಿರ ಕರೆಯಿಸಿಕೊಂಡಿದ್ದಾನೆ. ಬಾಗೇಪಲ್ಲಿ ನಿವಾಸಿಗಳಾದ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ, ವಿನೋದ್ ಕುಮಾರ್‌ರೊಂದಿಗೆ ಸಲೀಂ, ರಾಜ್‌ನನ್ನು ಕೂರಿಸಿಕೊಂಡು ಚಿತ್ರಾವತಿ ಅಣೆಕಟ್ಟಿನ ಬಳಿ ಕರೆದುಕೊಂಡು ಹೋಗಿದ್ದಾರೆ. ಡ್ರ್ಯಾಗರ್ ಹಾಗೂ ಇತರೆ ಆಯುಧಗಳಿಂದ ರಾಜ್‌ಗೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾರೆ ಎಂದು ಮಿಥುನ್ ಕುಮಾರ್ ವಿವರಿಸಿದರು.

ADVERTISEMENT

ಆರೋಪಿ ಸಲೀಂ ರೌಡಿಯಾಗಿದ್ದು, ಕೊಲೆ, ಸುಲಿಗೆ, ದರೋಡೆ, ಕೊಲೆಗೆ ಯತ್ನ ಸೇರಿದಂತೆ 38 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ತಲಘಟ್ಟಪುರ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. ಆರೋಪಿಗಳಾದ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ, ವಿನೋದ್ ಕುಮಾರ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ಸಲೀಂನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಾಗೇಪಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ನಗದು ಬಹುಮಾನ ನೀಡಲಾಗುವುದು ಎಂದು ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ, ಕೆ.ರವಿಶಂಕರ್ ನೇತೃ
ತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ನಯಾಜ್ ಬೇಗ್, ಸಬ್ ಇನ್ಸ್‌ಪೆಕ್ಟರ್‌ ಜಿ.ಕೆ.ಸುನೀಲ್ಕುಮಾರ್ ಸಿಬ್ಬಂದಿಯಾದ ಶಿವಪ್ಪ ಎನ್. ಬ್ಯಾಕೋಡ, ಬಿ.ಆರ್.ಬಾಬು, ಅಂಬರೀಶ್, ಮಧುಸೂದನ್, ನಟರಾಜ್, ಮೋಹನ್ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.