ADVERTISEMENT

ಶಿಡ್ಲಘಟ್ಟ: ಹಣಕ್ಕಾಗಿ ವೃದ್ಧ ದಂಪತಿ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 3:06 IST
Last Updated 11 ಫೆಬ್ರುವರಿ 2022, 3:06 IST
ಶ್ರೀನಿವಾಸ್
ಶ್ರೀನಿವಾಸ್   

ಶಿಡ್ಲಘಟ್ಟ: ನಗರದ ಕಾಮಾಟಿಗರ ಪೇಟೆಯ ವಾಸವಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ವೃದ್ಧ ದಂಪತಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.

ಶ್ರೀನಿವಾಸ್ ಅಲಿಯಾಸ್ ದೊಂತಿ ಸೀನಪ್ಪ(76) ಮತ್ತು ಅವರ ಪತ್ನಿ ಪದ್ಮಾವತಿ(67) ಕೊಲೆಯಾದವರು.

ಮನೆಯಲ್ಲಿ ಇಬ್ಬರಷ್ಟೇ ವಾಸಿಸುತ್ತಿದ್ದು ಹಣ, ಚಿನ್ನಾಭರಣಗಳಿಗೆ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿನ ಬೀರು ಕಪಾಟುವನ್ನು ಕಿತ್ತು ಬಟ್ಟೆಗಳನ್ನು ಚೆಲ್ಲಾಡಿದ್ದು ಹಣ, ಚಿನ್ನಾಭರಣಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ADVERTISEMENT

ಹಳೆಯ ಮನೆ ಇದಾಗಿದೆ. ಮನೆಯ ಮೇಲ್ಚಾವಣಿಯಲ್ಲಿನ ಗವಾಕ್ಷಿ (ಮನೆಯೊಳಗೆ ಬೆಳಕಿಗಾಗಿ ಕಿಂಡಿ) ಮೂಲಕ ಮನೆಯೊಳಗೆ ಕೊಲೆಗಾರರು ನುಸುಳಿ ಈ ದುಷ್ಕೃತ್ಯ ನಡೆಸಿದ್ದಾರೆ. ಪದ್ಮಾವತಿ ಅವರ ತಲೆ ಹಿಡಿದು ಬಾಗಿಲ ವಸಲಿಗೆ ಚಚ್ಚಿದ ರೀತಿಯಲ್ಲಿದ್ದರೆ, ಶ್ರೀನಿವಾಸ್ ಅವರ ತಲೆಗೆ ಮಾರಕಾಸ್ತ್ರದಿಂದ ಹೊಡೆದ ರೀತಿಯಲ್ಲಿ ಇಬ್ಬರ ಹೆಣಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಶ್ರೀನಿವಾಸ್ ಅವರ ಮೈಮೇಲೆ ಬಟ್ಟೆಗಳು ಇರಲಿಲ್ಲ.

ಬುಧವಾರ ರಾತ್ರಿ 10.30ರ ಆಸುಪಾಸಿನಲ್ಲಿ ದಂಪತಿ ಮನೆಯಲ್ಲಿ ಮಾತನಾಡಿಕೊಳ್ಳುವ ಸದ್ದನ್ನು ಅಕ್ಕಪಕ್ಕದವರು ಕೇಳಿಸಿಕೊಂಡಿದ್ದಾರೆ. ಹಾಗಾಗಿ ನಡುರಾತ್ರಿಯ ನಂತರ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆ ಕೆಲಸದಾಕೆ ಗುರುವಾರ ಬೆಳಿಗ್ಗೆ ಬಂದು ಬಾಗಿಲು ಬಡಿದರೂ ತೆಗೆಯದೆ ಇದ್ದಾಗ ಹಿಂಬಾಗಿಲ ಮೂಲಕ ಮನೆಯೊಳಗೆ ತೆರಳಿದಾಗ ಶ್ರೀನಿವಾಸ್‌ ಮನೆಯೊಳಗೆ ಬಿದ್ದಿದ್ದು ಕಂಡು ಭಯಗೊಂಡು ಹೊರಗೆ ಬಂದು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಮದುವೆ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ವೃದ್ಧ ದಂಪತಿಯಷ್ಟೇ ಮನೆಯಲ್ಲಿ ವಾಸವಿದ್ದರು. ವಾಸವಿ ರಸ್ತೆಯಲ್ಲಿ ಜವಳಿ ಅಂಗಡಿ ನಡೆಸುತ್ತಿದ್ದ ಶ್ರೀನಿವಾಸ್, ಬಟ್ಟೆ ಅಂಗಡಿ ಸೀನಪ್ಪ ಎಂದೇ ಚಿರಪರಿಚಿತರಾಗಿದ್ದರು. ಶಿಡ್ಲಘಟ್ಟ ನಗರದಲ್ಲಿನ ತುಂಬಾ ಹಳೆಯದಾದ ದೊಂತಿಯವರ ಛತ್ರದ ಮಾಲೀಕರಲ್ಲಿ ಇವರೂ ಒಬ್ಬರಾಗಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್‌ಪಿ ಚಂದ್ರಶೇಖರ್, ಸಿಪಿಐ ಪುರುಷೋತ್ತಮ್, ಎಸ್‌ಐ ಸತೀಶ್ ಭೇಟಿ ನೀಡಿದ್ದರು.

‘ದಂಪತಿಯನ್ನು ಹಣ, ಚಿನ್ನಾಭರಣಗಳಿಗಾಗಿ ಕೊಲೆ ಮಾಡಿರಬಹುದು. ಆದರೆ, ಎಲ್ಲಾ ರೀತಿಯ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು. ಆರೋಪಿಗಳ ಪತ್ತೆಗೆ ಎಸ್‌.ಐ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗುತ್ತದೆ. ಡಿವೈಎಸ್‌ಪಿ ಅವರೇ ತಂಡಗಳ ಉಸ್ತುವಾರಿವಹಿಸಲಿದ್ದಾರೆ’ ಎಂದು ಮಿಥುನ್ ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.