ADVERTISEMENT

ಚಿಕ್ಕಬಳ್ಳಾಪುರ: ರಸ್ತೆಗಾಗಿ ಬೀದಿಗಿಳಿದ ಮುಷ್ಟೂರು ಜನರು

ಕಾಮಗಾರಿಗೆ ಭೂಮಿ ಪೂಜೆ ನಡೆಸಿ ನಾಲ್ಕು ತಿಂಗಳು

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 6:01 IST
Last Updated 27 ಜುಲೈ 2025, 6:01 IST
ರಸ್ತೆಗಾಗಿ ಮುಷ್ಟೂರಿನಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು
ರಸ್ತೆಗಾಗಿ ಮುಷ್ಟೂರಿನಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು   

ಚಿಕ್ಕಬಳ್ಳಾಪುರ: ಭೂಮಿ ಪೂಜೆ ನೆರವೇರಿಸಿ ನಾಲ್ಕು ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಗುತ್ತಿಗೆದಾರ ರಸ್ತೆಯನ್ನು ಕಿತ್ತಿರುವುದರಿಂದ ತೀರಾ ಅಧ್ವಾನವಾಗಿದೆ. ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಮುಷ್ಟೂರು ಗ್ರಾಮಸ್ಥರು ಶನಿವಾರ ಪ್ರತಿಭಟಿಸಿದರು.

ನಗರ ಹೊರವಲಯದ ಮುಷ್ಟೂರಿನ ನಡು ರಸ್ತೆಯಲ್ಲಿಯೇ ಕುಳಿತ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದರು. ವಾಹನಗಳನ್ನು ತಡೆದರು. 

ಮುಷ್ಟೂರು ರಸ್ತೆ ಅಭಿವೃದ್ಧಿಗೆ ಮಾರ್ಚ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಭೂಮಿ ಪೂಜೆ ನೆರವೇರಿಸಿದ್ದರು. ತಿಂಗಳ ಹಿಂದೆ ಗುತ್ತಿಗೆದಾರ ರಸ್ತೆಯನ್ನು ಪೂರ್ಣವಾಗಿ ಕಿತ್ತಿದ್ದಾರೆ. ಆ ನಂತರ ಯಾವುದೇ ಬೆಳವಣಿಗೆಗಳೂ ನಡೆದಿಲ್ಲ. ಇದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ADVERTISEMENT

ಮುಖಂಡ ಜಿ.ಎಂ.ಶ್ರೀಧರ್ ಮಾತನಾಡಿ, ‘ಗ್ರಾಮಕ್ಕೆ ರಸ್ತೆ ಕಲ್ಪಿಸುವಂತೆ ಐದಾರು ವರ್ಷಗಳಿಂದ ನಿರಂತವಾಗಿ ಹೋರಾಟ ನಡೆಸಿದ್ದೇವೆ. ₹3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಶಾಸಕ ಭೂಮಿ ಪೂಜೆ ಸಹ ನಡೆಸಿದ್ದಾರೆ. ತಿಂಗಳ ಹಿಂದೆ ಗುತ್ತಿಗೆದಾರರು ರಸ್ತೆ ಸಹ ಕಿತ್ತಿದ್ದಾರೆ. ರಸ್ತೆ ಕಿತ್ತ ನಂತರ ಗುತ್ತಿಗೆದಾರ ಇತ್ತ ಕಡೆ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊಣಕಾಲುದ್ದದ ಗುಂಡಿಗಳು ರಸ್ತೆಯಲ್ಲಿ ಇವೆ. ಕೇತೇನಹಳ್ಳಿ, ಮುಷ್ಟೂರು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳ ಜನರು ಇದೇ ರಸ್ತೆಯಲ್ಲಿ ಸಂಚರಿಸುವರು. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹ ಇದೇ ರಸ್ತೆ ಬಳಸುವರು. ಗುಂಡಿಗಳ ಕಾರಣಕ್ಕೆ ಅಪಘಾತ ನಡೆದು ಒಬ್ಬ ಯುವಕ ಮೃತಪಟ್ಟಿದ್ದಾನೆ ಎಂದು ಹೇಳಿದರು.

ಈಶಾ ಯೋಗ ಕೇಂದ್ರಕ್ಕೆ ಇದೇ ರಸ್ತೆ ಮೂಲಕ ವಾಹನಗಳು ತೆರಳುತ್ತವೆ. ರಾತ್ರಿ 1 ಗಂಟೆವರೆಗೂ ವಾಹನಗಳ ಓಡಾಟದಿಂದ ದೂಳು ಏಳುತ್ತಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಟಿಪ್ಪರ್ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗುತ್ತಿದೆ ಎಂದರು.  

ಸಮಸ್ಯೆ ಬಗ್ಗೆ ಎರಡು ತಿಂಗಳ ಹಿಂದೆ ಶಾಸಕರ ಗಮನಕ್ಕೆ ತಂದೆವು. ಶಾಸಕರಿಗೆ ಕಳಂಕ ತರಬೇಕು ಎನ್ನುವ ಉದ್ದೇಶದಿಂದ ಗುತ್ತಿಗೆದಾರ ಕೆಲಸ ಮಾಡುತ್ತಿಲ್ಲ. ಈ ಹಿಂದೆ ರಸ್ತೆಯಲ್ಲಿ ಅಲ್ಪಸ್ವಲ್ಪವಾದರೂ ಸಂಚರಿಸಬಹುದಿತ್ತು. ಆದರೆ ಈಗ ತೀರಾ ಅಧ್ವಾನವಾಗಿದೆ ಎಂದರು.

ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಡಾ.ಕೆ.ಸುಧಾಕರ್ ₹5.50 ಕೋಟಿ ಅನುದಾನ ನೀಡಿದ್ದರು. ಕಾಮಗಾರಿ ಆರಂಭವಾಗುವಷ್ಟರಲ್ಲಿ ಅವರು ಸೋಲು ಅನುಭವಿಸಿದರು. ಈಗ ಶಾಸಕ ಪ್ರದೀಪ್ ಈಶ್ವರ್ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ನಾಲ್ಕು ತಿಂಗಳಾಗಿದೆ. ₹3 ಕೋಟಿ ವಿಶೇಷ ಅನುದಾನ ಸಹ ನೀಡಿದ್ದೇನೆ ಎಂದಿದ್ದಾರೆ ಎಂದರು.

ಕೆಲಸ ಏಕೆ ಮಾಡುತ್ತಿಲ್ಲ, ಶಾಸಕರಿಂದ ಅಥವಾ ಅಧಿಕಾರಿಗಳಿಂದ ಸಮಸ್ಯೆ ಆಗಿದೆಯಾ? ಯಾರು ಹೊಣೆ ಎನ್ನುವ ಬಗ್ಗೆ ಗುತ್ತಿಗೆದಾರರು ತಿಳಿಸಬೇಕು. ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ಬೈರಾರೆಡ್ಡಿ, ಗೋವಿಂದ್, ರಾಮು, ಗಜೇಂದ್ರ, ಶಿವಣ್ಣ, ವೆಂಕಟೇಶ್ ಸುಮಿತ್ರಾ ನಾಗರಾಜ್, ಚಲಪತಿ, ಮುನಿಸ್ವಾಮಿ, ಮುನಿನಾರಾಯಣ, ವೆಂಕಟೇಶಪ್ಪ ಮುರುಳಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.