ADVERTISEMENT

ನಂದಿಗೆ ರೋಪ್ ವೇ; ಸರ್ಕಾರ ಅಸ್ತು

2.93 ಕಿ.ಮೀ ಉದ್ದದ ರೋಪ್ ವೇ ನಿರ್ಮಾಣಕ್ಕೆ ₹ 93.40 ಕೋಟಿ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 12:09 IST
Last Updated 19 ಫೆಬ್ರುವರಿ 2022, 12:09 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಿಂದ 60 ಕಿ.ಮೀ ದೂರದ ನಂದಿ ಗಿರಿಧಾಮ ಆಕರ್ಷಕ ಪ್ರವಾಸಿ ತಾಣವಾಗಿದೆ. ಪ್ರವಾಸಿಗರಿಗೆ ವಾರಾಂತ್ಯದಲ್ಲಿ ಭೇಟಿ ನೀಡಲು ಸೂಕ್ತ ಸ್ಥಳವಾಗಿದೆ. ಪಾರಂಪರಿಕ ಸ್ಮಾರಕ, ಕೋಟೆ, ಮನಸ್ಸಿಗೆ ಮುದ ನೀಡುವ ಪರಿಸರದಿಂದ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ ಎಂದು ತಿಳಿಸಿದ್ದಾರೆ.

ಈ ಭಾಗದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಬೇರೆ ದೇಶಗಳಿಂದಲೂ ಪ್ರವಾಸಿಗರನ್ನು ಸೆಳೆಯಬಹುದು ಎಂಬ ಅಂಶ ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಡಿಬಿಎಫ್‌ಒಟಿ ಮಾದರಿಯಲ್ಲಿ ರೋಪ್-ವೇ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿತ್ತು ಎಂದಿದ್ದಾರೆ.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ₹ 93.40 ಕೋಟಿ ವೆಚ್ಚದ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಗಮನ ಸೆಳೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ರೋಪ್-ವೇ ಯೋಜನೆಯಿಂದ ನಂದಿ ಬೆಟ್ಟ ಕೆಲವೇ ವರ್ಷಗಳಲ್ಲಿ ಅತ್ಯಂತ ಆಕರ್ಷಣೀಯ ಪ್ರವಾಸಿ ಸ್ಥಳವಾಗಿ ಅಭಿವೃದ್ಧಿ ಆಗಲಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಿಂದಾಗಿ ಚಿಕ್ಕಬಳ್ಳಾಪುರದ ಇತಿಹಾಸ, ಪರಂಪರೆ, ನಿಸರ್ಗ ರಮಣೀಯತೆ ಹೊರಜಗತ್ತಿಗೆ ತಿಳಿಯಲಿದೆ. ಹೆಚ್ಚು ಪ್ರವಾಸಿಗರು ಬರುವುದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತದೆ. ಸ್ಥಳೀಯ ಆರ್ಥಿಕತೆ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದಾರೆ.

ರೋಪ್-ವೇ ನಿರ್ಮಾಣದಿಂದ ಪರಿಸರ ಸ್ನೇಹಿ ವಾತಾವರಣ ಸೃಷ್ಟಿ ಆಗುತ್ತದೆ. ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಜನಜಂಗುಳಿಯನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು ಎಂದು ತಿಳಿಸಿದ್ದಾರೆ.

****

50 ಕ್ಯಾಬಿನ್; 28 ನಿಮಿಷ ಪ್ರಯಾಣ

ನಂದಿ ಬೆಟ್ಟದ ತಪ್ಪಲಿನಿಂದ ಸುಮಾರು 2.93 ಕಿ.ಮೀ ಎತ್ತರದ ಬೆಟ್ಟ ಪ್ರದೇಶಕ್ಕೆ ರೋಪ್ ವೇ ನಿರ್ಮಿಸಿ ಪ್ರವಾಸಿಗರನ್ನು ಕರೆದೊಯ್ಯಲು ಉದ್ದೇಶಿಸಲಾಗಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಲ್ಯಾಂಡಿಂಗ್ ಸ್ಟೇಷನ್ (ಇಳಿಯುವ ಸ್ಥಳ) ಬೆಟ್ಟದ ತಳಭಾಗ ಹಾಗೂ ಮೇಲ್ಭಾಗದ ಎರಡೂ ಕಡೆ ಇರುವಂತೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಒಟ್ಟು 18 ಟವರ್ ಗಳನ್ನು ನಿರ್ಮಿಸಲಾಗುತ್ತದೆ. ರೆಸ್ಟೋರೆಂಟ್, ಕೆಫೆ, ಆಹಾರ ಮಳಿಗೆ ಮತ್ತಿತರ ಮಳಿಗೆಗಳನ್ನು ನಿರ್ಮಿಸಲು ಅವಕಾಶ ಇರುತ್ತದೆ. ರೋಪ್-ವೇ ನಲ್ಲಿ 50 ಕ್ಯಾಬಿನ್‌ಗಳು ಇರಲಿವೆ. ಪ್ರತಿಯೊಂದರಲ್ಲೂ 10 ಮಂದಿ ಪ್ರಯಾಣಿಸಬಹುದು. ಒಟ್ಟು 28 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.