ADVERTISEMENT

ನಾಳೆ ‘ನಂದಿ ಗಿರಿ ಪ್ರದಕ್ಷಿಣೆ’; ಪಕ್ಷಾತೀತ ಕಾರ್ಯಕ್ರಮ; ಸಂಸದ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 4:57 IST
Last Updated 31 ಜನವರಿ 2026, 4:57 IST
ನಂದಿಗಿರಿ ಪ್ರದಕ್ಷಿಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು
ನಂದಿಗಿರಿ ಪ್ರದಕ್ಷಿಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಗುರುತಾಗಿ ಫೆ.1ರಂದು ‘ನಂದಿಗಿರಿ ಪ್ರದಕ್ಷಿಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಘಮಾಸದ ಹುಣ್ಣಿಮೆಯ ಅಂಗವಾಗಿ 1ರಂದು ಸಂಜೆ 4 ಕ್ಕೆ ನಂದಿ ಗಿರಿ ಪ್ರದಕ್ಷಿಣೆಯು ನಂದಿ ಗ್ರಾಮದ ಭೋಗ ನಂದೀಶ್ವರ ದೇಗುಲದಿಂದ ಆರಂಭವಾಗಲಿದೆ. 14 ಕಿ.ಮೀಯ ಪ್ರದಕ್ಷಿಣೆ ಪೂರ್ಣಗೊಳಿಸಿ ಮತ್ತೆ ದೇಗುಲಕ್ಕೆ ಮರಳಲಾಗುತ್ತದೆ.  ದೊಡ್ಡ ಸಂಖ್ಯೆಯ ಶಿವಭಕ್ತರು ಪಾಲ್ಗೊಳ್ಳುವರು ಎಂದು ಹೇಳಿದರು.

ನಂದಿಗಿರಿ ಪ್ರದಕ್ಷಿಣೆಯು ಐತಿಹಾಸಿಕ ಕಾರ್ಯಕ್ರಮ. ಪ್ರತಿ ತಿಂಗಳ ಹುಣ್ಣಿಮೆಯ ದಿನ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ಪಕ್ಷಾತೀತ, ರಾಜಕೀಯ ಹೊರತಾದ ಕಾರ್ಯಕ್ರಮ. ವಿವಿಧ ಭಜನಾ ಮಂಡಳಿಗಳ ಪ್ರತಿನಿಧಿಗಳು ಹಾಗೂ ಸಾಂಸ್ಕೃತಿಕ ಸಂಘಗಳ ಮುಖಂಡರು, ಸಾಧು ಸಂತರು ಪಾಲ್ಗೊಳ್ಳುವರು ಎಂದರು.

ADVERTISEMENT

ತಮಿಳುನಾಡಿನ ಅರುಣಾಚಲೇಶ್ವರದಲ್ಲಿ ಪ್ರದಕ್ಷಿಣೆ ಕಾರ್ಯಕ್ರಮ ನಡೆಯುತ್ತದೆ. ಅದೇ ರೀತಿಯಲ್ಲಿ ಇಲ್ಲಿಯೂ ಶ್ರೇಷ್ಠವಾದ ಪ್ರದಕ್ಷಿಣೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಭಾಗವಹಿಸಬಹುದು ಎಂದು ಹೇಳಿದರು.

ಈ ಬಾರಿ ಸುಮಾರು ಎರಡು ಸಾವಿರ ಜನರು ಗಿರಿಪ್ರದಕ್ಷಿಣೆಯಲ್ಲಿ ಪಾಲ್ಗೊಳ್ಳುವರು. ಇದನ್ನು ಆಂದೋಲನದ ರೀತಿಯಲ್ಲಿ ಶಿವಭಕ್ತರು ನಡೆಸುವರು. ಜನರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವರು. ಎಷ್ಟೇ ಕಾರ್ಯ ಒತ್ತಡಗಳು ಇದ್ದರೂ ಪ್ರತಿ ಹುಣ್ಣಿಮೆ ದಿನ ನಡೆಯುವ ಗಿರಿಪ್ರದಕ್ಷಿಣೆಯಲ್ಲಿ ನಾನು ಪಾಲ್ಗೊಳ್ಳುವೆ. ಭೋಗ ನಂದೀಶ್ವರ ದೇಗುಲದಲ್ಲಿ ಪ್ರತಿ ವರ್ಷವೂ ಆಚರಿಸುತ್ತಿದ್ದ ಶಿವೋತ್ಸವವನ್ನು ಮತ್ತೆ ಆಚರಣೆಗೆ ತರಬೇಕು ಎಂದುಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.

ಹುಣ್ಣಿಮೆಯ ದಿನ ಚಂದ್ರನು ಪೂರ್ಣರೂಪದಲ್ಲಿ ಬೆಳಗುವನು. ಸೂರ್ಯ, ಚಂದ್ರರು ಕಣ್ಣಿಗೆ ಕಾಣುವ ದೇವರು ಎನ್ನುವ ನಂಬಿಕೆ ಇದೆ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು ಕೂಡ ರಂಜಾನ್‌ ಸಮಯದಲ್ಲಿ ಚಂದ್ರನ ಗೋಚರತೆಯನ್ನು ಆಧರಿಸಿ ಹಬ್ಬ ಆಚರಿಸುತ್ತಾರೆ. ಆದ್ದರಿಂದ ಎಲ್ಲ ಧರ್ಮದವರೂ ಚಂದ್ರನನ್ನು ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಮಾಘಮಾಸದ ಹುಣ್ಣಿಮೆಯ ದಿನ ಶ್ರೇಷ್ಠವಾಗಿದೆ. ಇದೇ ದಿನದಂದು ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರದಕ್ಷಿಣೆಗೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ ಎಂದರು. 

ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ: ಪಶ್ಚಿಮ ಬಂಗಾಳ ಸರ್ಕಾರವು ಬಾಂಗ್ಲಾ ದೇಶದ ನಾಗರಿಕರ ಪ್ರವೇಶಕ್ಕೆ ಬಾಗಿಲು ತೆರೆದಿದೆ. ದೇಶದ ನಾನಾ ಭಾಗಗಳಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಇದ್ದಾರೆ. ತೃಣಮೂಲ ಕಾಂಗ್ರೆಸ್ ದಾರಿಯನ್ನೇ ಕಾಂಗ್ರೆಸ್ ಪಕ್ಷವೂ ಹಿಡಿಯುತ್ತಿದೆ. ಪಾಕಿಸ್ತಾನ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಅವ್ಯಾಹತವಾಗಿ ದಾಳಿ, ಕಗ್ಗೊಲೆ ನಡೆಯತ್ತಿದೆ. ಮತ ಬ್ಯಾಂಕ್ ರಾಜಕೀಯಕ್ಕಾಗಿ ದೇಶದ ಭದ್ರತೆಯನ್ನೇ ಹಾಳುಗೆಡವುತ್ತಿದ್ದಾರೆ ಎಂದು ದೂರಿದರು.

ಮಾಧ್ಯಮಗೋಷ್ಠಿಗೂ ಮುನ್ನ ನಂದಿಗಿರಿ ಪ್ರದಕ್ಷಿಣೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮುಖಂಡರು ವಿವಿಧ ಸಲಹೆಗಳನ್ನು ನೀಡಿದರು. 

ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಯತೀಶ್, ಚಿಕ್ಕಕಾಡಿಗೇನಹಳ್ಳಿ ಕೃಷ್ಣಮೂರ್ತಿ, ಗಜೇಂದ್ರ, ಮಂಚನಬಲೆ ಶ್ರೀನಿವಾಸ್, ಜೆ.ನಾಗರಾಜು, ಶ್ರೀನಿವಾಸ್, ದೇವಸ್ಥಾನಹೊಸಹಳ್ಳಿ ರಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

ಕಮಿಷನ್‌ಗಾಗಿ ಟೆಂಡರ್ ರದ್ದು

‘ಚಿಕ್ಕಬಳ್ಳಾಪುರಕ್ಕೆ ನಗರೋತ್ಥಾನ ಯೋಜನೆಯಡಿ 2023ರಲ್ಲಿ ₹ 40 ಕೋಟಿ ಹಣ ತಂದಿದ್ದೇನೆ. ಆಗಲೇ ಟೆಂಡರ್ ಸಹ ಆಗಿತ್ತು. ಆದರೆ ಹೆಚ್ಚಿನ ಕಮಿಷನ್ ನೀಡಲಿಲ್ಲ ಎಂದು ಟೆಂಡರ್ ರದ್ದುಗೊಳಿಸಿದ್ದಾರೆ’ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಯಾವ ಗುತ್ತಿಗೆದಾರರು ಹೆಚ್ಚು ಕಮಿಷನ್ ಕೊಡುವರೊ ಅವರಿಗೆ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಗೌರಿಬಿದನೂರು–ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿಸಿದ್ದು ನಾನು.  ಆದರೆ ಕೆಲವರು ವಿಡಿಯೊ ಮಾಡಿ ನಾನು ಮಾಡಿಸಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಎಂ.ಜಿ ರಸ್ತೆ ವಿಸ್ತರಣೆ ವೇಳೆ ತಮಗೆ ಬೇಕಾದ ಅಂಗಡಿಗಳನ್ನು ಉಳಿಸಿ ನಮ್ಮ ವಿರುದ್ಧವಿರುವ ಅಂಗಡಿಗಳನ್ನು ತೆಗದು ಹಾಕಿ ಎಂದು ಜನಪ್ರತಿನಿಧಿಗಳು ಹೇಳುತ್ತಾರಂತೆ. ನಾನು ಅಭಿವೃದ್ಧಿ ವಿಚಾರವಾಗಿ ಎಂದಿಗೂ ರಾಜಕೀಯ ಬೆರೆಸಿಲ್ಲ ಎಂದು ಹೇಳಿದರು.

‘ರಾಜ್ಯಪಾಲರಿಗೆ ಲೋಕಾಯುಕ್ತರಿಗೆ ದೂರು’

ಮಾಲೂರು ತಾಲ್ಲೂಕು ಟೇಕಲ್‌ ಹೋಬಳಿಯ ಅಗಲಕೋಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ದಾನ ನೀಡಿದ್ದ 50 ಎಕರೆ ಜಮೀನನ್ನು ಎರಡು ಸಂಸ್ಥೆಗಳು ಕಬಳಿಸಿವೆ. ಈ ಸಂಬಂಧ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಜಮೀನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದೆ. ಆದರೆ ಇದುವರೆಗೂ ಕ್ರಮವಹಿಸಿಲ್ಲ. ಈ ಬಗ್ಗೆ ರಾಜ್ಯಪಾಲರು ಲೋಕಾಯುಕ್ತರಿಗೆ ದೂರು ನೀಡುವೆ. ಪ್ರಧಾನಿ ಅವರಿಗೂ ಪತ್ರ ಬರೆಯುವೆ ಎಂದು ಡಾ.ಕೆ.ಸುಧಾಕರ್‌ ತಿಳಿಸಿದರು. ನಾನು ಹಲವು ತೋಟಗಳಿಗೆ ಭೇಟಿ ನೀಡಿದ್ದೇನೆ. ಹೀಗೆ ಭೇಟಿ ನೀಡುವ ವಿಡಿಯೊ ಇಟ್ಟುಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಮಾಲೂರಿಗೆ ಹೋಗಿ ನಾನು ಜಮೀನು ಖರೀದಿಸಬೇಕೆ? ಚಿಕ್ಕಬಳ್ಳಾಪುರದಲ್ಲಿ ಜಮೀನು ಇಲ್ಲವೆ ಎಂದು ಪ್ರಶ್ನಿಸಿದರು. ಇಂತಹ ಅಪಪ್ರಚಾರಗಳಿಗೆ ಜಗ್ಗುವವನು ನಾನಲ್ಲ. ಸಾವಿರಾರು ಎಕರೆ ಜಮೀನನ್ನು ಪರಿಶಿಷ್ಟ ಜಾತಿ ಪಂಗಡ ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದವರಿಗೆ ಬಗರ್‌ಹುಕುಂ ಯೋಜನೆಯಡಿ ಹಂಚಿಕೆ ಮಾಡಿದ್ದೇನೆ. ಕಾಂಗ್ರೆಸ್‌ನವರು ಮೊದಲು ಈ ವಿಚಾರದಲ್ಲಿ ಅಪಪ್ರಚಾರ ಮಾಡುವುದನ್ನು ಬಿಟ್ಟು ಭೂಕಬಳಿಕೆಯ ವಿರುದ್ಧ ಮಾತನಾಡಲಿ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.