ಪ್ರಜಾವಾಣಿ ವಾರ್ತೆ
ಚಿಂತಾಮಣಿ; ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯ ಬಳಸುವುದರಿಂದ ರೈತರಿಗೆ ಹಣ ಮತ್ತು ಶ್ರಮದ ಉಳಿತಾಯದ ಜೊತೆಗೆ ಇಳುವರಿ ಹೆಚ್ಚಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ಸಲಹೆ ನೀಡಿದರು.
ತಾಲ್ಲೂಕಿನ ಮುರಗಮಲ್ಲ ಹೋಬಳಿಯ ಪೆದ್ದೂರು ಗ್ರಾಮದ ವೆಂಕಟರೆಡ್ಡಿ ಜಮೀನಿನಲ್ಲಿ ಕೃಷಿ ಇಲಾಖೆ ಮತ್ತು ಇಫ್ಕೊ- ಕಿಸಾನ್ ಸಂಸ್ಥೆಯ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.
ಹರಳು ರೂಪದ ಯೂರಿಯ ಬಳಕೆಯಿಂದ ಸೂಕ್ಷ್ಮಾಣು ಜೀವಿಗಳು ನಾಶವಾಗುವುದರಿಂದ ಶೇ 60 ರಷ್ಟು ಮಾತ್ರ ಇಳುವರಿ ಹೆಚ್ಚಾಗಲಿದೆ. ನ್ಯಾನೋ ಯೂರಿಯ ಬಳಕೆ ಯಿಂದ ಶೇ 80ರಷ್ಟು ಇಳುವರಿ ಹೆಚ್ಚಾಗಲಿದೆ. ಒಂದು ಎಕರೆ ಸಿಂಪಡಣೆ ಮಾಡಲು ಕೇವಲ 10 ನಿಮಿಷ ಮಾತ್ರ ತೆಗೆದುಕೋಳ್ಳುತ್ತದೆ ಎಂದರು.
ರೈತರು ಬೆಳೆದ ಬೆಳೆಗಳಿಗೆ ರೋಗ ಮತ್ತು ಕೀಟಬಾಧೆ ತಪ್ಪಿಸಲು ನೀರು, ಔಷಧಿಗಳನ್ನು ಸಂಗ್ರಹಿಸಿ ಕೂಲಿಕಾರ್ಮಿಕರನ್ನು ಕರೆತರುವುದು ಅಗತ್ಯವಿಲ್ಲ. ಕ್ಷಣ ಮಾತ್ರದಲ್ಲಿ 4-5 ಜನರ ಕೆಲಸ ಮಾಡಲಿದೆ ಎಂದು ಕೃಷಿ ಅಧಿಕಾರಿ ನಾಗಾರ್ಜುನ ಬಾಬು ತಿಳಿಸಿದರು.
ಇಫ್ಕೊ-ಕಿಸಾನ್ ಸಂಸ್ಥೆಯ ಪ್ರತಾಪ್ ಮಾತನಾಡಿ, ಹತ್ತು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಡ್ರೋನ್ ನಿರ್ವಹಣೆಗೆ ಇಬ್ಬರ ತಂಡ ನಿರಂತರ ಕೆಲಸ ಮಾಡಬೇಕಾಗುತ್ತದೆ. ಡ್ರೋನ್ 10 ರಿಂದ 20 ನಿಮಿಷದಲ್ಲಿ ಒಂದು ಎಕರೆಗೆ ಕ್ರಿಮಿನಾಶಕ ಅಥವಾ ಕಳೆ ನಾಶಕ ಸಿಂಪಡಿಸುವ ಸಾಮರ್ಥ್ಯ ಹೊಂದಿದೆ. 10 ಲೀಟರ್ ನೀರು ಔಷಧ ಸೇರಿ 12 ಲೀಟರ್ ದ್ರಾವಣವನ್ನು ತುಂಬಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದರು.
ಪೆದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯರಪ್ಪರೆಡ್ಡಿ, ಸದಸ್ಯ ಅಭಿ, ಸಂಧ್ಯಾ, ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.