ADVERTISEMENT

‘ದ್ರವ’ ಯೂರಿಯಾಕ್ಕೆ ಹೆಚ್ಚಿದ ಬೇಡಿಕೆ

ಹರಳು ಯೂರಿಯಾ ಅಭಾವ l ದ್ರವರೂಪದ ಯೂರಿಯಾ ಬಳಕೆಗೆ ರೈತರ ಒಲವು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:25 IST
Last Updated 12 ಸೆಪ್ಟೆಂಬರ್ 2025, 6:25 IST
ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಜಮೀನಿನಲ್ಲಿ ಡ್ರೋನ್ ಸಹಾಯದಿಂದ ದ್ರವ ರೂಪದ ಯೂರಿಯಾ ಸಿಂಪಡಣೆ
ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಜಮೀನಿನಲ್ಲಿ ಡ್ರೋನ್ ಸಹಾಯದಿಂದ ದ್ರವ ರೂಪದ ಯೂರಿಯಾ ಸಿಂಪಡಣೆ   

ಗೌರಿಬಿದನೂರು: ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ ತಾಲ್ಲೂಕಿನಾದ್ಯಂತ ಉತ್ತಮ ಬಿತ್ತನೆಯಾಗಿದೆ. ಅಲ್ಲದೆ, ಕಳೆದ ಹಲವು ದಿನಗಳಿಂದ ಮತ್ತೆ ಬಿಡದೆ ಮಳೆ ಸುರಿಯುತ್ತಿರುವ ಕಾರಣ, ಉತ್ತಮ ಫಸಲು ಪಡೆದುಕೊಳ್ಳಬೇಕೆಂಬ ಕಾರಣಕ್ಕೆ ರೈತರು ಯೂರಿಯಾದ ಮೊರೆ ಹೋಗಿದ್ದಾರೆ. ಆದರೆ, ಕೆಲವು ಕಡೆಗಳಲ್ಲಿ ಹರಳು ಯೂರಿಯಾದ ಅಭಾವ ಹೆಚ್ಚಿದೆ. ಇದರಿಂದಾಗಿ ರೈತರು ಹರಳು ಯೂರಿಯಾ ಪಡೆಯಲು ಟಿಎಪಿಸಿಎಂಎಸ್ ಅಂಗಡಿಗಳ ಎದುರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. 

ಆದರೆ, ಗೌರಿಬಿದನೂರು ತಾಲ್ಲೂಕಿನ ರೈತರು ಮಾತ್ರ ಹರಳು ರೂಪದ ಯೂರಿಯಾ ಮೊರೆ ಹೋಗಿಲ್ಲ. ಬದಲಾಗಿ ದ್ರವರೂಪದ ನ್ಯಾನೊ ಯೂರಿಯಾದತ್ತ ಮುಖ ಮಾಡಿದ್ದಾರೆ. ಹರಳು ರೂಪದ ಯೂರಿಯಾ ನೀರು ಹಾಯಿಸಿದಾಗ, ಶೇ 50ರಷ್ಟು ಕರಗುತ್ತದೆ. ಉಳಿದದ್ದು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇರುತ್ತದೆ. ಆದರೆ, ನ್ಯಾನೊ ಯೂರಿಯಾ ಹರಳು ರೂಪದ ಯೂರಿಯಾಕ್ಕಿಂತ ಶೇ 8–10ರಷ್ಟು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ರೈತರು ಹರ್ಷ ವ್ಯಕ್ತಪಡಿಸುತ್ತಾರೆ. 

ನ್ಯಾನೊ ಯೂರಿಯಾ ಬೆಳೆಗಳ ಮೇಲೆ ಸಿಂಪಡಣೆ ಮಾಡಿದ ಬಳಿಕ, ಎಲೆಗಳು ತ್ವರಿತವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ಬೆಳೆಗಳಿಗೆ ಬಹುಬೇಗನೇ ಪೌಷ್ಟಿಕಾಂಶ ದೊರೆಯುತ್ತದೆ. ಹೀಗಾಗಿ, ಹರಳು ರೂಪದ ಯೂರಿಯಾಕ್ಕಿಂತಲೂ ನ್ಯಾನೊ ಯೂರಿಯಾ ಹೆಚ್ಚು ಪರಿಣಾಮಕಾರಿಯಾಗಿದೆ. ಜೊತೆಗೆ ನ್ಯಾನೊ ಯೂರಿಯಾ ಪರಿಸರ ಸ್ನೇಹಿಯಾಗಿದೆ. ಇದೇ ಕಾರಣಕ್ಕೆ ರೈತರು ನ್ಯಾನೊ ಯೂರಿಯಾ ಬಳಕೆಯತ್ತ ಮುಖ ಮಾಡಿದ್ದಾರೆ. 

ADVERTISEMENT

ಅತಿಯಾದ ಹರಳು ರೂಪದ ಯೂರಿಯಾ ಬಳಕೆಯಿಂದ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗಗಳು ಹೆಚ್ಚಾಗಬಹುದು. ಮಣ್ಣು ಮತ್ತು ಪರಿಸರದ ಮೇಲೆ ಸಾಕಷ್ಟು ಪರಿಣಾಮವಾಗಲಿದೆ. ಅಲ್ಲದೆ, ಮಣ್ಣಿನ ರಚನೆ ಮತ್ತು ಗುಣಧರ್ಮ ಹಾಳಾಗುವ ಜೊತೆಗೆ ಆಮ್ಲೀಯತೆ ಬರುವ ಸಾಧ್ಯತೆಗಳು ಇದೆ. ಇದರಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರಜ್ಞಾವಂತ ರೈತರು. 

ತಾಲ್ಲೂಕಿನ ಮುದುಗೆರೆ, ಸಿಂಗಾನಹಳ್ಳಿ, ಪುಲಮಾಕಲಹಳ್ಳಿ, ಪುರ, ವಿದುರಾಶ್ವತ್ಥ ಸೇರಿದಂತೆ ವಿವಿಧ ಹಳ್ಳಿಗಳ ರೈತರು ದ್ರವರೂಪದ ನ್ಯಾನೊ ಯೂರಿಯಾದ ಬಳಕೆ ಪ್ರಾರಂಭಿಸಿದ್ದಾರೆ. ಇದನ್ನು ಸಿಂಪಡಣೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನವಾದ ಡ್ರೋನ್‌ಗಳ ಮೊರೆ ಹೋಗಿದ್ದಾರೆ. ಕೋರಮಂಡಲ್ ಮತ್ತು ಇಪ್ಕೊ ಸಂಸ್ಥೆಗಳ ನೆರವಿನೊಂದಿಗೆ ಡ್ರೋನ್‌ಗಳನ್ನು ಬಳಸಿಕೊಂಡು ದ್ರಾವಣ ರೂಪದ ಯೂರಿಯಾ ಸಿಂಪಡಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಒಂದು ಎಕರೆಗೆ ₹500 ದರದಲ್ಲಿ 20ರಿಂದ 30 ನಿಮಿಷದಲ್ಲಿ ಔಷಧ ಸಿಂಪಡಣೆ ಮಾಡಬಹುದು. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಜೊತೆಗೆ ಕೂಲಿ ಕಾರ್ಮಿಕರ ಕೊರತೆಯೂ ನೀಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡಲಾಯಿತು. 

ನ್ಯಾನೋ ಯೂರಿಯಾವು ನೇರವಾಗಿ ಗಿಡಗಳ ಮೇಲೆ ಸಿಂಪಡಣೆ ಮಾಡುವುದರಿಂದ ಬೆಳೆಗಳ ಬೆಳವಣಿಗೆಗೆ ವೇಗ ನೀಡುತ್ತದೆ, ಇದು ಹರಳು ರೂಪದ ಯೂರಿಯಾಕ್ಕಿಂತ‌ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಇಳುವರಿ ಸಹ ಹೆಚ್ಚಾಗಿದೆ.

ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಜಮೀನಿನಲ್ಲಿ ಡ್ರೋನ್ ಸಹಾಯದಿಂದ ದ್ರವ ರೂಪದ ಯೂರಿಯಾ ಸಿಂಪಡಣೆ
ದ್ರವರೂಪದ ನ್ಯಾನೊ ಯೂರಿಯಾ ಪರಿಸರ ಸ್ನೇಹಿ ಮತ್ತು ಇಳುವರಿಯಲ್ಲಿ ಗಣನೀಯ ಬೆಳವಣಿಗೆ ಕಂಡುಬರುತ್ತಿದೆ. ನ್ಯಾನೊ ಯೂರಿಯಾ ಬಳಕೆಯಿಂದ ರೈತರಿಗೆ ಪ್ರಯೋಜನ 
ಡಿ. ರಾಜೇಶ್ವರಿ ಕೃಷಿ ಸಹಾಯಕ ನಿರ್ದೇಶಕಿ
ನ್ಯಾನೊ ಯೂರಿಯಾವನ್ನು ನೇರವಾಗಿ ಗಿಡಗಳ ಮೇಲೆ ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆಗೆ ವೇಗ ನೀಡುತ್ತದೆ. ಹರಳು ಯೂರಿಯಾಕ್ಕಿಂತಲೂ ಹೆಚ್ಚು ಪರಿಣಾಮಕಾರಿ
ರಾಜಶೇಖರ್ ರೈತ ಮುದುಗೆರೆ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.