ಬಾಗೇಪಲ್ಲಿ: ಪಟ್ಟಣದ ಪ್ರವಾಸಿ ಮಂದಿರದ ಬಳಿಯ ಹುತಾತ್ಮ ರೈತರ ಸ್ಮಾರಕದ ಬಳಿ ಸಿಪಿಎಂ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಹುತಾತ್ಮ ರೈತರ ದಿನ ಹಮ್ಮಿಕೊಳ್ಳಲಾಯಿತು.
1980ರಲ್ಲಿ ನರಗುಂದ, ನವಲಗುಂದದಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಖಂಡಿಸಿ, ಪಟ್ಟಣದಲ್ಲಿ ನಡೆದ ಕಮ್ಯೂನಿಸ್ಟರ ನಾಯಕತ್ವದಲ್ಲಿ ಪ್ರತಿಭಟನ ಮೆರವಣಿ ನಡೆಯಿತು. ಈ ಘಟನೆಯಲ್ಲಿ ತಾಲ್ಲೂಕಿನ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಅವರು ಹುತಾತ್ಮರಾದರು. ರೈತರ ಹುತಾತ್ಮ ಸ್ಮಾರಕಕ್ಕೆ ಹೂವಿನ ಹಾರ ಹಾಕಿ ಕೆಂಪು ವಂದನೆಯ ಘೋಷಣೆ ಕೂಗಲಾಯಿತು.
ಪ್ರಜಾನಾಟ್ಯ ಕಲಾ ಮಂಡಲಿಯ ಪಿ.ಓಬಳರಾಜು, ಚನ್ನರಾಯಪ್ಪ, ಗೊಲ್ಲಪಲ್ಲಿ ಮಂಜುನಾಥ್ ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.
ಕಮ್ಯೂನಿಸ್ಟ್ ಹೋರಾಟಗಾರ ಪುತ್ರ ಚಂದ್ರಶೇಖರ್ ಮಾತನಾಡಿ, ‘1980ರಲ್ಲಿ ನಮ್ಮ ತಂದೆ ಎನ್.ವಿ.ನಾಗಭೂಷಣಾಚಾರಿ, ಎಚ್.ಎಸ್.ರಾಮರಾವ್, ಜಯರಾಮರೆಡ್ಡಿ ಸೇರಿದಂತೆ 36 ಮಂದಿ ಕಮ್ಯೂನಿಸ್ಟ್ ನಾಯಕರು ಪ್ರತಿಭಟನಾ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ 10 ಸಾವಿರ ರೈತರು ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಹೋರಾಟ ದಮನ ಮಾಡಲು, ಅಂದಿನ ಕಾಂಗ್ರೆಸ್ ಸರ್ಕಾರವು ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಗೋಲಿಬಾರ್ ಮಾಡಿತು’ ಎಂದು ಹೇಳಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ಕ್ಷೇತ್ರದಲ್ಲಿ ಕುಡಿಯುವ ನೀರು, ಮನೆ, ನಿವೇಶನ ಹಂಚಿಕೆ, ಉಳುವವನಿಗೆ ಭೂಮಿ ಸೇರಿದಂತೆ ವಿವಿಧ ಹಕ್ಕುಗಳಿಗಾಗಿ 1970ರ ದಶಕದಿಂದ ಹೋರಾಟ ಮಾಡಲಾಗುತ್ತಿದೆ. ಆ ಹೋರಾಟಗಳನ್ನು ಕಾಂಗ್ರೆಸ್ ದಮನ ಮಾಡಿಕೊಂಡು ಬಂದಿದೆ ಎಂದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ, ಜನರಿಗೆ ಭೂಮಿ ಹಂಚಿಕೆ ಮಾಡಿಲ್ಲ ಎಂದು ದೂರಿದರು.
ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿದರು,
ಸಿಪಿಎಐ(ಎಂ) ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್, ಅಶ್ವಥ್ಥಪ್ಪ, ಜಯರಾಮರೆಡ್ಡಿ, ಎಂ.ಎನ್.ರಘುರಾಮರೆಡ್ಡಿ, ಮುಖಂಡರಾದ ಚನ್ನರಾಯಪ್ಪ, ಡಿ.ಟಿ.ಮುನಿಸ್ವಾಮಿ, ಜಿ.ಮುಸ್ತಾಫ, ಪಿ.ಒಬಳರಾಜು, ಎಚ್.ಎ.ರಾಮಲಿಂಗಪ್ಪ, ಗೊಲ್ಲಪಲ್ಲಿಮಂಜುನಾಥ್, ಜಿ.ಕೃಷ್ಣಪ್ಪ, ಜಹೀರ್ ಬೇಗ್, ಬೈರೆಡ್ಡಿ, ರಾಮಾಂಜಿ, ಲಕ್ಷ್ಮಣರೆಡ್ಡಿ, ರಶೀದ್, ಬಿ.ಎಚ್.ರಫೀಕ್, ಸೋಮಶೇಖರ್, ಈಶ್ವರರೆಡ್ಡಿ, ರವಣಪ್ಪ, ರವಣ, ನೆರಸಿಂಹರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.