ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೇಮರಿ ಹಾಗೂ ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನವದೆಹಲಿಯ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಿಂದ ‘ ರಾಷ್ಟ್ರೀಯ ಆರೋಗ್ಯ ಗುಣಮಟ್ಟದ ಮೌಲ್ಯ ಮಾಪನ ಪುರಸ್ಕಾರ–2024’ ದೊರೆತಿದೆ.
ಮಿಟ್ಟೇಮರಿ, ಪಾತಪಾಳ್ಯ ಆರೋಗ್ಯ ಪ್ರಾಥಮಿಕ ಕೇಂದ್ರಗಳಿಗೆ ಜುಲೈನಲ್ಲಿ ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಕುರಿತು ಮಾಹಿತಿ ಕಲೆ ಹಾಕಿತ್ತು.
ಕೇಂದ್ರಗಳಲ್ಲಿ ಒಳರೋಗಿಗಳ, ಹೊರರೋಗಿಗಳಿಗೆ ಚಿಕಿತ್ಸೆ, ಪ್ರಾಯೋಗಾಲಯ, ಔಷಧ ಔಪಚಾರ ಕೊಠಡಿ, ಔಷಧಿ ಉಗ್ರಾಣ ಮತ್ತು ಆಡಳಿತದ ಅಂಕಿ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತು. ಇವುಗಳ ಮೌಲ್ಯಮಾಪನ ನಡೆಸಿ ಈ ಪುರಸ್ಕಾರ ಘೋಷಿಸಿದೆ.
ಮಿಟ್ಟೇಮರಿ ಆರೋಗ್ಯ ಪ್ರಾಥಮಿಕ ಕೇಂದ್ರದ ವ್ಯಾಪ್ತಿಗೆ ಮಿಟ್ಟೇಮರಿ, ಕಾನಗಮಾಕಲಪಲ್ಲಿ, ಯಲ್ಲಂಪಲ್ಲಿ, ದೇವರಗುಡಿಪಲ್ಲಿ, ಪರಗೋಡು ಗ್ರಾಮ ಪಂಚಾಯಿತಿಗಳು ಹಾಗೂ 91 ಗ್ರಾಮಗಳು ಬರುತ್ತವೆ. ಕೇಂದ್ರದ ಆರೋಗ್ಯಾಧಿಕಾರಿ ಡಾ.ನಿತೀನ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು 50 ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದಾರೆ.
ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಎರಡು ಪಂಚಾಯಿತಿ, 28 ಗ್ರಾಮಗಳು ಒಳಪಟ್ಟಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ರೋಗಿಗಳಿಗೆ ತುರ್ತು ಚಿಕಿತ್ಸೆ, ಅರಿವು ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸ್ವಚ್ಛತೆಯಿಂದ ಕೂಡಿದ ಶೌಚಾಲಯ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಗರ್ಭಿಣಿಯರ, ಬಾಣಂತಿಯರ, ರೋಗಿಗಳ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.
ಆಸ್ಪತ್ರೆಗೆ ಬರಲು ಆಗದಂತಹ ರೋಗಿಗಳಿಗೆ ಮನೆಯಲ್ಲಿಯೇ, ಚುಚ್ಚುಮದ್ದು, ಔಷಧಿಗಳು ನೀಡಿ ನಿಗಾ ವಹಿಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇವುಗಳನ್ನು ಪರಿಗಣಿಸಿ ಪುರಸ್ಕಾರ ನೀಡಲಾಗಿದೆ.
ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ಆರೋಗ್ಯ ಸಿಬ್ಬಂದಿ ಪರಿಶ್ರಮದಿಂದ ಪಾತಪಾಳ್ಯ, ಮಿಟ್ಟೇಮರಿ ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕಾರ ಲಭಿಸಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ‘ಪ್ರಜಾವಾಣಿ’ ಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಪುರಸ್ಕಾರ ಲಭಿಸಿರುವುದು ಮತ್ತಷ್ಟು ಸೇವೆ ಮಾಡಲು ಸ್ಫೂರ್ತಿ ತಂದಿದೆಡಾ.ನಿತಿನ್ ವೈದ್ಯಾಧಿಕಾರಿ ಮಿಟ್ಟೇಮರಿ
ಗ್ರಾಮೀಣ ಪ್ರದೇಶದ ಜನರಿಗೆ ಚಿಕಿತ್ಸೆ ನೀಡುವುದೇ ನಮ್ಮ ಕಾಯಕ. ದೆಹಲಿಯ ತಂಡದವರು ಪ್ರಾಥಮಿಕ ಕೇಂದ್ರಗಳಲ್ಲಿನ ಆರೋಗ್ಯ ಸೇವೆ ಗುರುತಿಸಿ ಪುರಸ್ಕಾರ ನೀಡಿದೆಡಾ.ವಿನೋದ್ ಪಾತಪಾಳ್ಯ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.