ADVERTISEMENT

ರಸ್ತೆ ಸುರಕ್ಷತಾ ಮಾಸಾಚರಣೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:52 IST
Last Updated 7 ಜನವರಿ 2026, 5:52 IST
ಚಿಂತಾಮಣಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳ ಬಿಡುಗಡೆ
ಚಿಂತಾಮಣಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳ ಬಿಡುಗಡೆ   

ಚಿಂತಾಮಣಿ: ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ವಿಕ್ರಂ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಸೋಮವಾರ ಆಯೋಜಿಸಲಾಯಿತು. 

ನಗರದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್. ಶಕುಂತಲಾ ಮಾತನಾಡಿ, ‘ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಎಲ್ಲಕ್ಕಿಂತ ಜೀವ ಮುಖ್ಯ’ ಎಂದು ಹೇಳಿದರು.

ಸಂಚಾರ ನಿಯಮಗಳ ಉಲ್ಲಂಘನೆ, ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು, ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಜಾಗೃತಿ ಮೂಡಿಸುವುದೇ ಮಾಸಾಚರಣೆ ಉದ್ದೇಶವಾಗಿದೆ. ಮನೆಗಳಲ್ಲಿ ನಿಮ್ಮನ್ನು ನಂಬಿಕೊಂಡ ಕುಟುಂಬ ಇರುತ್ತದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವರಾಜ್ ಮಾತನಾಡಿ, ಔಷಧದ ಮೂಲಕ ಯಾವುದೇ ಕಾಯಿಲೆಯನ್ನು ಗುಣಪಡಿಸಬಹುದು. ಆದರೆ, ಅಪಘಾತವಾದರೆ ನಿಮಿಷವೂ ಸಿಗುವುದಿಲ್ಲ. ಯುವಜನರು, ವಿದ್ಯಾರ್ಥಿಗಳು ಜಾಗರೂಕರಾಗಬೇಕು. ಪೋಷಕರು ಹಾಗೂ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಬಾರದು ಎಂದರು.

ಬ್ರೇಕ್ ಇನ್‌ಸ್ಪೆಕ್ಟರ್ ದಾಸೇಗೌಡ ಮಾತನಾಡಿ, ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಅಪಘಾತಗಳಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ ಎಂದು ಸಮೀಕ್ಷೆಗಳು ಹೇಳುತ್ತವೆ. ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡುವುದೇ ಅಪಘಾತಗಳಿಗೆ ಕಾರಣವಾಗಿದೆ ಎಂದರು. 

ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಪಡೆದಿರಬೇಕು. ವಾಹನಗಳ ಎಲ್ಲ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಈ ಎಲ್ಲ ನಿಯಮಗಳನ್ನು ಪಾಲನೆ ಮಾಡಿದರೆ ಖಂಡಿತ ಅಪಘಾತಗಳನ್ನು ನಿಯಂತ್ರಿಸಬಹುದು ಎಂದರು. 

ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿ ಬೈರಾರೆಡ್ಡಿ, ಜಿಲ್ಲೆಯಲ್ಲಿ ಸರಾಸರಿ ವಾರ್ಷಿಕ 12 ಸಾವಿರ ಅಪಘಾತಗಳಾಗುತ್ತಿವೆ. 350-700 ಜನರು ಬಲಿಯಾಗುತ್ತಿದ್ದಾರೆ. 18 ವರ್ಷ ಕೆಳಗಿನವರು ವಾಹನ ಚಾಲನೆ ಮಾಡಬಾರದು. ದಂಡ ಹಾಕುವುದೇ ಸರ್ಕಾರದ ಉದ್ದೇಶವಲ್ಲ. ಜೀವಗಳನ್ನು ಕಾಪಾಡುವುದು ಮುಖ್ಯ ಉದ್ದೇಶ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್, ಉಪಾಧ್ಯಕ್ಷ ಶಿವಾನಂದ ಹಾಗೂ ಪದಾಧಿಕಾರಿಗಳು, ವಿಕ್ರಮ್ ಸಂಸ್ಥೆ ಪ್ರಾಂಶುಪಾಲೆ ಭುವನೇಶ್ವರಿ  ಇದ್ದರು. 

ಚಿಂತಾಮಣಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಸಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್.ಶಕುಂತಲ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.