ADVERTISEMENT

ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ಅಗತ್ಯ: ಎಂ.ಎನ್. ಯರ‍್ರಪ್ಪ

ಚಿಂತಾಮಣಿಯಲ್ಲಿ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 3:17 IST
Last Updated 3 ನವೆಂಬರ್ 2020, 3:17 IST
ಚಿಂತಾಮಣಿ ತಾಲ್ಲೂಕಿನ ಏನಿಗದಲೆ ಗ್ರಾಮದಲ್ಲಿ ಚಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಚಿಂತಾಮಣಿ ತಾಲ್ಲೂಕಿನ ಏನಿಗದಲೆ ಗ್ರಾಮದಲ್ಲಿ ಚಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು   

ಚಿಂತಾಮಣಿ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರು ಮತ್ತು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಛಲವಾದಿ ಮಹಾಸಭೆಯ ಚಿಲಕಲನೇರ್ಪು ಹೋಬಳಿಯ ಅಧ್ಯಕ್ಷ ಎಂ.ಎನ್. ಯರ‍್ರಪ್ಪ ನುಡಿದರು.

ಚಿಲಕಲನೇರ್ಪು ಹೋಬಳಿಯ ಏನಿಗದಲೆ ಗ್ರಾಮದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚಲವಾದಿ ಮಹಾಸಭಾ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಶಾಲೆಗಳಲ್ಲಿ ಶಿಕ್ಷಕರು ಹಾಗೂ ಮನೆಗಳಲ್ಲಿ ಪೋಷಕರ ನಡವಳಿಕೆಗಳನ್ನು ಅನುಕರಣೆ ಮಾಡುತ್ತಾರೆ. ಪೋಷಕರು ಮನೆಗಳಲ್ಲಿ ಟಿ.ವಿ ನೋಡುತ್ತಿದ್ದರೆ ಮಕ್ಕಳು ಸಹ ಟಿ.ವಿ.ವ್ಯಾಮೋಹ ಬೆಳೆಸಿಕೊಳ್ಳುತ್ತಾರೆ. ಪೋಷಕರು ಉತ್ತಮ ನಡವಳಿಕೆಗಳನ್ನು ರೂಢಿಸಿಕೊಂಡರೆ ಮಕ್ಕಳು ಸಹ ಹಾಗೆ ನಡೆದುಕೊಳ್ಳುತ್ತಾರೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರಷ್ಟೇ ಪೋಷಕರು ಮುಖ್ಯ’ ಎಂದರು.

ADVERTISEMENT

‘ಮಕ್ಕಳು ಪಠ್ಯಗಳ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆ ಭೌತಿಕವಾಗಿ, ಭಾವನಾತ್ಮಕವಾಗಿ ಪ್ರಗತಿಯತ್ತ ಸಾಗಬಹುದು. ಕ್ರೀಡೆ, ಚಿತ್ರಕಲೆ, ವ್ಯಾಯಾಮ ಮತ್ತಿತರ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಕಾನೂನು ಸಲಹೆಗಾರ ಎಸ್.ಆಂಜನೇಯಪ್ಪ ಮಾತನಾಡಿ, ‘ಮಾನವನ ನಡವಳಿಕೆಗಳನ್ನು ಬದಲಿಸುವ ಮಹತ್ವದ ಸಾಧನ ವಿದ್ಯೆ. ಅದನ್ನು ಛಲ, ಗುರಿಯೊಂದಿಗೆ ನಿರಂತರ ಸಾಧನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ನಡಂಪಲ್ಲಿ ಶ್ರೀನಿವಾಸ್, ಸುನಿತಾ, ಕೃಷಿ ಅಧಿಕಾರಿಗಳಾದ ನಾಗರಾಜು, ಪ್ರಸಾದ್, ಪಶುವೈದ್ಯಾಧಿಕಾರಿ ಮಂಜುನಾಥ್, ಚಲವಾಧಿ ಮಹಾಸಭಾದ ಮುಖಂಡರಾದ ಟಿ.ವೆಂಕಟರವಣಪ್ಪ, ಮುನಿಆಂಜನಪ್ಪ, ಮಂಜುನಾಥ್, ಸಿ.ಕೃಷ್ಣಪ್ಪ, ಕೈವಾರ ಮಂಜುನಾಥ್, ವಿ.ಸುಧಾಕರ್, ಅಶ್ವತ್ಥ್, ವೈ.ವಿ.ಮನೋಜ್, ವಿಜಯಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.