ADVERTISEMENT

ಚಿಕ್ಕಬಳ್ಳಾಪುರ: ಕೆಳಗಿನ ತೋಟದಲ್ಲಿ ಗುಬ್ಬಿಗಳಿಗೆ ಗೂಡು

ಮನೆಗಳ ಚಾವಣಿಗಳೇ ಗುಬ್ಬಿಗಳಿಗೆ ನೆಲೆ

ಡಿ.ಎಂ.ಕುರ್ಕೆ ಪ್ರಶಾಂತ
Published 4 ಮಾರ್ಚ್ 2021, 3:12 IST
Last Updated 4 ಮಾರ್ಚ್ 2021, 3:12 IST
ಕೆಳಗಿನ ತೋಟದ ಮನೆಯೊಂದರಲ್ಲಿ ಗುಬ್ಬಿ ಗೂಡು
ಕೆಳಗಿನ ತೋಟದ ಮನೆಯೊಂದರಲ್ಲಿ ಗುಬ್ಬಿ ಗೂಡು   

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟ (ಎಚ್‌.ಎಸ್.ಗಾರ್ಡನ್‌) ಒಮ್ಮೆ ಸುತ್ತಿದರೆ ಬಹುತೇಕ ಮನೆಗಳ ಚಾವಣಿಗಳಲ್ಲಿ, ಸಜ್ಜಗಳಲ್ಲಿ, ಎತ್ತರವಾದ ಕಿಟಕಿಗಳಲ್ಲಿ, ಕಾರಿನ ಶೆಡ್‌ಗಳಲ್ಲಿ, ಹೊರಾಂಡದಲ್ಲಿ ಗುಬ್ಬಿ ಗೂಡು ಕಂಡು ಬರುತ್ತದೆ.

ಇದೇನು, ಪ್ರತಿ ಮನೆಗಳ ಬಳಿ ಗುಬ್ಬಿಗಳ ಗೂಡು ಎಂದು ಅಚ್ಚರಿಯಿಂದ ಆ ಮನೆಗಳ ಜನರನ್ನು ಮಾತಿಗೆ ಎಳೆದರೆ ಗುಬ್ಬಿಗಳ ಬಗೆಗಿನ ಪ್ರೀತಿ ಜನರ ಮಾತುಗಳಲ್ಲಿ ಇಣುಕುತ್ತದೆ.

ಕೆಳಗಿನ ತೋಟ ಈ ಹಿಂದೆ ತೆಂಗು, ದ್ರಾಕ್ಷಿ ತೋಟಗಳ ಸಾಲೇ ಆಗಿತ್ತು. ನಂತರ ತೋಟಗಳ ಜಾಗಗಳಲ್ಲಿ ಬೃಹತ್ ಕಟ್ಟಡಗಳು, ಮನೆಗಳು ತಲೆ ಎತ್ತಿದವು. ಬಡಾವಣೆಯಾಗಿ ರೂಪಾಂತರವಾಯಿತು. ಇಲ್ಲಿದ್ದ ಅಪಾರವಾದ ಗುಬ್ಬಿಗಳ ಸಂತತಿ ಕಣ್ಮರೆಯಾಗಲು ಬಿಡದೆ ಜನರೇ ತಮ್ಮ ಮನೆಗಳ ಬಳಿ ಗೂಡುಗಳನ್ನು ಕಟ್ಟಿದರು.

ADVERTISEMENT

ರಟ್ಟು, ಪ್ಲಾಸ್ಟಿಕ್ ಡಬ್ಬಗಳನ್ನು ಕತ್ತರಿಸಿ ಸರಾಗವಾಗಿ ಒಳ ಹೋಗಿ ಬರಲು ಅನುಕೂಲವಾಗುವ ರೀತಿಯಲ್ಲಿ ಮನೆಗಳ ಮಾಲೀಕರು ಗುಬ್ಬಿ ಗೂಡು ನಿರ್ಮಿಸಿದ್ದಾರೆ. ಕೆಲವರು ಪ್ಲೇವುಡ್‌ನಿಂದ ಗುಬ್ಬಿಗಳಿಗಾಗಿಯೇ ಗೂಡು ಮಾಡಿಸಿದ್ದಾರೆ. ಬಡವರ ಸಣ್ಣ ಸೂರಿನಿಂದ ಹಿಡಿದು ಸಿರಿವಂತರ ಮನೆಯ ಆವರಣದವರೆಗೂ ಗೂಡಿದೆ.

ಅವುಗಳಿಗೆ ಅಪಾಯ ಎದುರಾಗದ ಸ್ಥಳಗಳಲ್ಲಿಯೇ ಗೂಡುಗಳನ್ನು ಇಟ್ಟಿದ್ದಾರೆ. ಈ ಬಾಕ್ಸ್‌ಗಳ ಒಳಗೆ ಹುಲ್ಲಿನ ಸೂರು ಕಟ್ಟಿಕೊಂಡು ಗುಬ್ಬಿಗಳು ಸಂತತಿ ಬೆಳೆಸುತ್ತಿವೆ. ಜನರ ಈ ಕಾಳಜಿಯಿಂದ ಕೆಳಗಿನ ತೋಟದಲ್ಲಿ ಗುಬ್ಬಿಗಳು ಹಿಂಡು ಹಿಂಡಾಗಿವೆ. ಬೇಸಿಗೆಯ ದಿನಗಳಲ್ಲಿ ಮನೆಯ ತಾರಸಿಯಲ್ಲಿ ಗುಬ್ಬಿಗಳಿಗಾಗಿಯೇ ನೀರಿಡುವ ಪದ್ಧತಿ ಸಹ ಇಲ್ಲಿನ ಜನರಲ್ಲಿದೆ.

’ಐದು ವರ್ಷಗಳ ಹಿಂದೆ ಕೆಳಗಿನ ತೋಟದಲ್ಲಿ ಮನೆ ಕಟ್ಟಿದೆವು. ಅಂದು ನಮ್ಮ ಸುತ್ತಲಿನ ಬಹಳಷ್ಟು ಮನೆಗಳಲ್ಲಿ ಗುಬ್ಬಿ ಗೂಡುಗಳನ್ನು ನೋಡಿದೆವು. ನಮ್ಮ ಮನೆ ಸುತ್ತಲೂ ಗುಬ್ಬಿಗಳು ಹೆಚ್ಚಿದ್ದವು. ಮನೆಯ ಒಳಗೂ ಬರುತ್ತಿದ್ದವು. ಆಗ ಮನೆಯ ಒಂದು ಬದಿಯ ಸಜ್ಜಾಕ್ಕೆ ರಟ್ಟಿನ ಬಾಕ್ಸ್ ಮತ್ತು ಮತ್ತೊಂದು ಬದಿಗೊಂದು ಬಾಕ್ಸ್ ಇರಿಸಿದೆವು. ಅಂದಿನಿಂದ ಇಂದಿನವರೆಗೂ ಈ ಗೂಡುಗಳಲ್ಲಿ ಗುಬ್ಬಿಗಳು ಇವೆ‘ ಎನ್ನುವರು ಕೆಳಗಿನ ತೋಟದ ಪಾಪಣ್ಣ ಲೇಔಟ್‌ನ ಆರ್.ರಾಮಮೂರ್ತಿ.

’ಕೆಳಗಿನ ತೋಟದಲ್ಲಿ ಈ ಹಿಂದೆಒಮ್ಮೆ ಮೊಬೈಲ್ ಟವರ್ ಅಳವಡಿಸಲು ಸಹ ಮುಂದಾಗಿದ್ದರು. ಜನರೆಲ್ಲರೂ ಒಗ್ಗೂಡಿ ಟವರ್ ನಿರ್ಮಾಣ ವಿರೋಧಿಸಿದ್ದರು‘ ಎಂದು ಮಾಹಿತಿ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.