ADVERTISEMENT

ನಂದಿಬೆಟ್ಟ ಪ್ರವೇಶ ನಿರ್ಬಂಧಕ್ಕೆ ಸೂಚನೆ

ರಜಾ ದಿನ; ಕೋವಿಡ್ ಲಸಿಕೆ ಅಭಿಯಾನದ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸುಧಾಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 5:39 IST
Last Updated 11 ಏಪ್ರಿಲ್ 2021, 5:39 IST

ಚಿಕ್ಕಬಳ್ಳಾಪುರ: ‘ಕೋವಿಡ್ ಎರಡನೇ ಅಲೆಯು ವ್ಯಾಪಕವಾಗಿದೆ. ರಜಾ ದಿನಗಳಲ್ಲಿ ನಂದಿಬೆಟ್ಟದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚುತ್ತಿದೆ. ಎಲ್ಲ ಸರ್ಕಾರಿ ರಜಾ ದಿನಗಳಲ್ಲಿ ಪ್ರವಾಸಿಗರಿಗೆ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವ ಬಗ್ಗೆ ಕ್ರಮವಹಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ಕೋವಿಡ್ ಲಸಿಕೆ ಅಭಿಯಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮಹಾತ್ಮ ಜ್ಯೋತಿ ಬಾ ಪುಲೆ ಅವರ ಜನ್ಮ ದಿನಾಚರಣೆ ಅಂಗವಾಗಿ 45 ವರ್ಷ ಮೇಲ್ಪಟ್ಟ ಎಲ್ಲರೂ ಏ. 11ರಂದು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕು. ಜಿಲ್ಲೆಯಲ್ಲಿ ಯಾವುದೇ ಜಾತ್ರೆಗಳು ನಡೆಯಲು ಅವಕಾಶ ನೀಡಬಾರದು. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆಯೇ ಎಂಬ ಕುರಿತು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಬೇಕು. ಮಾರ್ಗಸೂಚಿ ಪಾಲಿಸದವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು ಎಂದರು.

ADVERTISEMENT

ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ಸಂಘ, ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು, ಜಿಲ್ಲೆಯ ಪ್ರಭಾವಿ ವ್ಯಕ್ತಿಗಳು, ಶಾಸಕರು, ಸಂಸದರ ಕೋವಿಡ್ ಲಸಿಕೆ ಅಭಿಯಾನದ ಕುರಿತು ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಏ. 14ರ ಅಂಬೇಡ್ಕರ್ ಜಯಂತಿಯ ದಿನ ನಗರದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಬೇಕು. ವಕೀಲರು, ಕಾನೂನು ತಜ್ಞರು ಒಳಗೊಂಡಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು, ಉಪ ವಿಭಾಗಾಧಿಕಾರಿ ಎ.ಎನ್. ರಘುನಂದನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.