ಚಿಂತಾಮಣಿ: ಡ್ರೋನ್ ಬಳಕೆಯು ರಕ್ಷಣಾ ಕ್ಷೇತ್ರ, ಮದುವೆ, ದೊಡ್ಡ ಸಮಾವೇಶಗಳಲ್ಲಿ ಮಾತ್ರ ಸೀಮಿತವಾಗಿತ್ತು. ಈ ತಂತ್ರಜ್ಞಾನವನ್ನು ಈಗ ಕೃಷಿ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳುವ ಪ್ರಯೋಗಗಳು ನಡೆಯುತ್ತಿವೆ.
ಡ್ರೋನ್ ಬಳಸಿಕೊಂಡು ಕೀಟನಾಶಕ ಮತ್ತು ಪೋಷಕಾಂಶಗಳನ್ನು ಸಿಂಪಡಣೆ ಮಾಡಬಹುದು. ವಿವಿಧ ಬೆಳೆಗಳ ನಾಟಿ, ಕೊಯ್ಲು, ಒಕ್ಕಲು ಮಾಡುವ ಯಂತ್ರಗಳನ್ನು ಬಾಡಿಗೆಗೆ ನೀಡುವಂತೆ ಡ್ರೋನ್‌ಗಳನ್ನು ಕೂಡ ಬಾಡಿಗೆ ನೀಡುವಂತಹ ಖಾಸಗಿ ಕಂಪನಿಗಳು ಈಗಾಗಲೇ ಜಿಲ್ಲೆಗೆ ಕಾಲಿಟ್ಟಿವೆ.
ಔಷಧಿ ಸಿಂಪಡಿಸಲು ಎಕರೆಗೆ ₹ 600 ರಿಂದ ₹ 1,250 ಬಾಡಿಗೆ ಪಡೆಯುತ್ತಾರೆ. ಡ್ರೋನ್‌ನ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಏರಿಳಿತವಾಗುತ್ತದೆ. ಒಂದು ಡ್ರೋನ್ ಮೂಲಕ ದಿನಕ್ಕೆ ಸುಮಾರು 15ರಿಂದ 20 ಎಕರೆ ಪ್ರದೇಶದಲ್ಲಿ ಔಷಧಿ ಸಿಂಪಡಿಸಬಹುದು.
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಿಕ್ರಾ ಯೋಜನೆಯಡಿ ತಾಲ್ಲೂಕಿನ ಹನುಮಯ್ಯಗಾರಹಳ್ಳಿ ಮತ್ತು ಸೋಮಕಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಟೊಮೆಟೊ, ಬದನೆ ಮತ್ತು ಬೀಟ್‌ರೋಟ್ ಬೆಳೆಗಳಿಗೆ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಮಿಶ್ರಣವಾದ ತರಕಾರಿ ಸ್ಪೆಷಲ್ ಸಿಂಪಡಿಸಲಾಯಿತು. ಮಾವು ಬೆಳೆಗೆ ಮಾವು ಸ್ಪೆಷಲ್ ಸಿಂಪಡಿಸಲಾಯಿತು.
‘ಒಂದು ಎಕರೆ ತರಕಾರಿ ತೋಟಕ್ಕೆ 10 ಲೀಟರ್ ದ್ರಾವಣ ಸಿಂಪಡಿಸಲು8-10 ನಿಮಿಷ ಬೇಕಾಗುತ್ತದೆ. 10 ವರ್ಷದ ಮಾವಿನ ತೋಟಕ್ಕೆ 20 ಲೀಟರ್ ದ್ರಾವಣ ಸಿಂಪಡಿಸಲು30 ನಿಮಿಷ ಬೇಕಾಗುತ್ತದೆ. ಈ ಡ್ರೋನ್ ಬಳಕೆಯಿಂದ ಶೇ 80-90ರಷ್ಟು ಸಿಂಪಡಣೆ ನೀರು ಮತ್ತು ಶೇ 35-40ರಷ್ಟು ಕೀಟನಾಶಕದ ಪ್ರಮಾಣವನ್ನು ಉಳಿತಾಯ ಮಾಡಬಹುದು’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೆ.ಎಸ್. ವಿನೋದಾ.
‘ಇದು ಒಂದು ಹೊಸ ತಾಂತ್ರಿಕತೆಯಾಗಿದೆ. ರೈತರು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಡ್ರೋನ್ ಬಳಕೆಯು ಇತ್ತೀಚಿನ ದಿನಗಳಲ್ಲಿ ಕೀಟನಾಶಕಗಳು ಪೋಲಾಗುವುದನ್ನು ತಪ್ಪಿಸುವುದಲ್ಲದೇ, ಕೂಲಿ ಕಾರ್ಮಿಕರ ಸಮಸ್ಯೆಯನ್ನು ಈ ತಂತ್ರಜ್ಞಾನದಿಂದ ನೀಗಿಸಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ. ಪಾಪಿರೆಡ್ಡಿ ಅಭಿಪ್ರಾಯಪಟ್ಟರು.
ಪ್ರಾತ್ಯಕ್ಷಿಕೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ವಿಶ್ವನಾಥ್, ಡಾ.ತನ್ವೀರ್ ಅಹ್ಮದ್, ವಿ.ಕೆ. ಆನಂದ ರೈತರೊಂದಿಗೆ ಸಂವಾದ ನಡೆಸಿದರು.
ಡ್ರೋನ್ ಉಪಯೋಗಿಸುವುದು ಮತ್ತು ಅದರಿಂದ ಆಗುವ ಉಪಯೋಗ ಕುರಿತು ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಡ್ರೋನ್ ಬಳಕೆಯಿಂದ ಕೃಷಿ ಖರ್ಚು ಕಡಿಮೆಯಾಗುತ್ತದೆ. ಕೂಲಿಯಾಳು ಸಮಸ್ಯೆ ನಿವಾರಣೆಯಾಗುತ್ತದೆ. ಪರೋಕ್ಷವಾಗಿ ಕೃಷಿಗೆ ಲಾಭದಾಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.