ADVERTISEMENT

ಗೌರಿಬಿದನೂರು: ಶಾಲೆಗಳಿಗೆ ಜೀವ ತುಂಬಿದ ‘ಕೊಡುಗೈ’

ಗೌರಿಬಿದನೂರು ಸರ್ಕಾರಿ ಶಾಲೆಗಳಿಗೆ ಹಳೆ ವಿದ್ಯಾರ್ಥಿಗಳು, ದಾನಿಗಳು, ವಿವಿಧ ಸಂಸ್ಥೆಗಳ ನೆರವು

ಎ.ಎಸ್.ಜಗನ್ನಾಥ್
Published 29 ನವೆಂಬರ್ 2021, 7:39 IST
Last Updated 29 ನವೆಂಬರ್ 2021, 7:39 IST
ಮೂರು ವರ್ಷಗಳ ನಂತರ ಮತ್ತೆ ಬಾಗಿಲು ತೆರೆದ ನಗರಗೆರೆ ಹೋಬಳಿಯ ಬಂಡಮೀದತಾಂಡಾ ಶಾಲೆ
ಮೂರು ವರ್ಷಗಳ ನಂತರ ಮತ್ತೆ ಬಾಗಿಲು ತೆರೆದ ನಗರಗೆರೆ ಹೋಬಳಿಯ ಬಂಡಮೀದತಾಂಡಾ ಶಾಲೆ   

ಗೌರಿಬಿದನೂರು: ತಾಲ್ಲೂಕು ನೆರೆಯ ಆಂಧ್ರಪ್ರದೇಶದ ಗಡಿ‌ಭಾಗಕ್ಕೆ ಹೊಂದಿಕೊಂಡಿದೆ. ಗಡಿಭಾಗದ ಕೆಲವುಸರ್ಕಾರಿ ಶಾಲೆಗಳು ಅಸ್ತಿತ್ವವನ್ನು ‌ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದವು. ಈ ವೇಳೆ ಹಳೇ ವಿದ್ಯಾರ್ಥಿಗಳು, ದಾನಿಗಳು ಹಾಗೂ ಗ್ರಾಮಪಂಚಾಯಿತಿಗಳ ಸಹಕಾರದಿಂದ ಅಳಿವಿನಂಚಿನಲ್ಲಿದ್ದ ಶಾಲೆಗಳು ಮತ್ತೆ ಮರು ಜೀವ ಪಡೆದಿವೆ. ಮಕ್ಕಳ ಭವಿಷ್ಯಕ್ಕೆ ಆಸರೆಯಾಗಿವೆ.

ತಾಲ್ಲೂಕಿನಲ್ಲಿ 163 ಸರ್ಕಾರಿ ಕಿರಿಯ ಪ್ರಾಥಮಿಕ ‌ಶಾಲೆಗಳು, 120 ಸರ್ಕಾರಿ ಹಿರಿಯ ಪ್ರಾಥಮಿಕ ‌ಶಾಲೆಗಳು ಹಾಗೂ 23 ಸರ್ಕಾರಿ ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳ ದಾಖಲಾತಿ ಕೊರತೆಯಿಂದಾಗಿ ಹಾಗೂ ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದಾಗಿ ಪ್ರತಿ ವರ್ಷ ಕನಿಷ್ಠ 2-3 ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದವು. ಆದರೆ ಕೋವಿಡ್ ಬಳಿಕ ಎಚ್ಚೆತ್ತ ಪೋಷಕರು ತಮ್ಮ ಮಕ್ಕಳನ್ನು ನಗರದಲ್ಲಿನ ಖಾಸಗಿ ಶಾಲೆಗಳಿಗೆ ದಾಖಲಿಸುವ ಬದಲಾಗಿಸ್ಥಳೀಯ ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಇದರಿಂದಾಗಿ ಪ್ರತೀ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ ತಾಲ್ಲೂಕಿನ ‌ಸರ್ಕಾರಿ ಶಾಲೆಗಳಿಗೆ 1000ಕ್ಕೂ‌ ಅಧಿಕ ಮಂದಿ ಮಕ್ಕಳು ಖಾಸಗಿ ಶಾಲೆಗಳಿಂದ ಬಂದು ದಾಖಲಾತಿ ಪಡೆದಿದ್ದಾರೆ. ಇದರ ಜತೆಗೆ ಸಾಕಷ್ಟು ಮಂದಿ ದಾನಿಗಳು ಮತ್ತು ಹಳೇ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಅವಶ್ಯ ಮೂಲ ಸೌಕರ್ಯಗಳು ಹಾಗೂ ಬೋಧನಾ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಶಾಲೆಗಳನ್ನು ಬಲಪಡಿಸಿದ್ದಾರೆ.

ADVERTISEMENT

ಕಳೆದ 2 ವರ್ಷದಲ್ಲಿ ಮಕ್ಕಳ ಕೊರತೆಯಿಂದಾಗಿ ಮುಚ್ಚಿದ್ದ ಬಂಡಮೀದತಾಂಡಾ, ಸುಕಾಲಿತಾಂಡಾ ಹಾಗೂ ಹೊಸಕೋಟೆ ಶಾಲೆಗಳನ್ನು ಮತ್ತೆ ಆರಂಭವಾಗಿವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅಜಾಕ್ಸ್ ಸಂಸ್ಥೆ ವಾಟದಹೊಸಹಳ್ಳಿ ಪ್ರೌಢಶಾಲೆ ಹಾಗೂ ಮಂಚೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೈಟೆಕ್ ಮಾದರಿಯ ಶೌಚಾಲಯಗಳನ್ನು ನಿರ್ಮಿಸಿದೆ.

ರೋಟರಿ ಹಾಗೂ ಸ್ಥಳೀಯ ದಾನಿಗಳ‌ ಸಹಕಾರದಿಂದ ನಾಮಗೊಂಡ್ಲು ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ‌ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಷಯಾಧಾರಿತ ‌ಮಾಹಿತಿ ಒಳಗೊಂಡ ಸ್ಮಾರ್ಟ್ ಟಿ.ವಿ ವಿತರಿಸಿದ್ದಾರೆ. ಗ್ರಾಮಾಂ ಟ್ರಸ್ಟ್ ನಿಂದ ವೆಂಕಟಾಪುರ ಶಾಲೆಯಲ್ಲಿ ಚಿತ್ರಕಲೆಯನ್ನು ಹಾಗೂ ಮಾದನಹಳ್ಳಿ ಮತ್ತು ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜತೆಗೆ ಸರ್ಕಾರದ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಇರದ ಶಾಲೆಗಳಿಗೆ ಹೊಸದಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.