ADVERTISEMENT

ಗ್ರಾನೈಟ್ ಘಟಕ ಸ್ಥಾಪನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:05 IST
Last Updated 26 ಮೇ 2025, 16:05 IST
ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಬಳಿ ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸ್ಸೆಸ್ಸಿಂಗ್ ಯೂನಿಟ್‌ಗೆ ಪರವಾನಗಿ ನೀಡದಂತೆ ಸಾಂಪ್ರದಾಯಿಕ ಕಲ್ಲು ಕುಟುಕರು ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಅವರಿಗೆ ಮನವಿ ಸಲ್ಲಿಸಿದರು
ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಬಳಿ ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸ್ಸೆಸ್ಸಿಂಗ್ ಯೂನಿಟ್‌ಗೆ ಪರವಾನಗಿ ನೀಡದಂತೆ ಸಾಂಪ್ರದಾಯಿಕ ಕಲ್ಲು ಕುಟುಕರು ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಅವರಿಗೆ ಮನವಿ ಸಲ್ಲಿಸಿದರು   

ಶಿಡ್ಲಘಟ್ಟ: ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಪುರಬೈರೇನಹಳ್ಳಿ ಬಳಿ ಗ್ರಾನೈಟ್ ಕಟ್ಟಿಂಗ್ ಮತ್ತು ಪ್ರೊಸೆಸ್ಸಿಂಗ್ ಘಟಕ ಸ್ಥಾಪನೆ ಯೋಜನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಯಾವುದೇ ರೀತಿ ಪರವಾನಗಿ ನೀಡಬಾರದು ಎಂದು ಗ್ರಾಮಸ್ಥರು ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮುಖಂಡ ಡಿಎಸ್‌ಎನ್ ರಾಜು, ‘ಈ ಪ್ರದೇಶದಲ್ಲಿ ಐವತ್ತು-ಅರವತ್ತು ವರ್ಷಗಳಿಂದ ಅನೇಕರು ಸಾಂಪ್ರದಾಯಿಕವಾಗಿ ಕಲ್ಲು ಹೊಡೆದು ಬದುಕು ಸಾಗಿಸುತ್ತಿದ್ದಾರೆ. ಈಗ ವ್ಯಕ್ತಿಯೊಬ್ಬರು ಸರ್ಕಾರದ ವಿವಿಧ ಇಲಾಖೆಗಳ ಅನುಮತಿ ಪಡೆದು ಗ್ರಾನೈಟ್ ಘಟಕ ಸ್ಥಾಪನೆಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಿಂದ ಸ್ಥಳೀಯರಿಗೆ ತೊಂದರೆ ಆಗಲಿದೆ’ ಎಂದರು. 

ADVERTISEMENT

ಪಿಡಿಒ ರಮೇಶ್,‘ಡಿ.ಗೋವಿಂದರಾಜು ಎಂಬುವರು ಸರ್ವೆ ನಂ43ರಲ್ಲಿ 2ಎಕರೆ ಹಾಗೂ ಸರ್ವೆ ನಂ.45ರಲ್ಲಿ 1ಎಕರೆ 30ಗುಂಟೆ ಭೂಮಿಯಲ್ಲಿ ಘಟಕ ಸ್ಥಾಪನೆಗೆ ಭೂ ಪರಿವರ್ತನೆ ಮಾಡಿಕೊಂಡು ಇ–ಖಾತೆ ಹಾಗೂ ಸಾಮಾನ್ಯ ಪರವಾನಗಿ ನೀಡಲು ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಗ್ರಾಮ ಸಭೆಯಲ್ಲಿ ಮಂಡಿಸಿದಾಗ 8 ಸದಸ್ಯರು ಪರವಾನಗಿ ನೀಡಲು ಒಪ್ಪಿಗೆ ಸೂಚಿಸಿದ್ದು, 6 ಸದಸ್ಯರು ವಿರೋಧಿಸಿದರು. ಬಹುಮತ ಆಧಾರದಲ್ಲಿ ತೀರ್ಮಾನ ಕೈಗೊಂಡು ಅರ್ಜಿ ಪುರಸ್ಕರಿಸಲಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಡಿ.ಪಿ.ನಾಗರಾಜ್ ಮಾತನಾಡಿ ‘ಸಾಂಪ್ರದಾಯಿಕ ಕಲ್ಲು ಹೊಡೆಯುವ ಮೂಲಕ ಯಾವುದೇ ತೆರಿಗೆ ಶುಲ್ಕ ಪಾವತಿ ಇಲ್ಲದಂತೆ ಗುತ್ತಿಗೆದಾರರು ಉದ್ಯಮ ನಡೆಸುತ್ತಿದ್ದಾರೆ. ಆದರೆ, ಈ ಹೊಸ ಘಟಕದಿಂದ ಪಂಚಾಯಿತಿಗೆ ವಾರ್ಷಿಕ ₹50ಲಕ್ಷ, ಸರ್ಕಾರಕ್ಕೆ ಸುಮಾರು ₹100ಕೋಟಿ ರಾಯಲ್ಟಿ ಲಭಿಸುತ್ತದೆ. ಸುಮಾರು 1500 ಸ್ಥಳೀಯರಿಗೆ ಉದ್ಯೋಗ ಅವಕಾಶ ಸಿಗಲಿದೆ. ಈ ಕಾರಣದಿಂದ ಪರವಾನಗಿ ನೀಡಲು ನಿರ್ಧರಿಸಿದ್ದೇವೆ’ ಎಂದರು.

ಹಿರಿಯ ಸದಸ್ಯ ಡಾ.ಧನಂಜಯರೆಡ್ಡಿ ಮಾತನಾಡಿ,‘ಆರು ಸದಸ್ಯರು ಪರಿಸರ ಹಾಗೂ ಸ್ಥಳೀಯರ ಹಿತ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಿದ್ದರೂ ಬಹುಮತ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕಾಯಿತು’ ಎಂದು ಸಭೆ ವಿವರ ನೀಡಿದರು.

ಈ ಪ್ರದೇಶದಲ್ಲಿ ಕ್ರಷರ್ ಅಥವಾ ಗ್ರಾನೈಟ್ ಘಟಕ ಆರಂಭವಾದರೆ ಬದುಕಲು ಬೀದಿಗೆ ಬೀಳಲಿದೆ ಎಂದು ಕೊಂಡಪ್ಪಗಾರಹಳ್ಳಿ ವಿಜಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.