ADVERTISEMENT

ಚಿಂತಾಮಣಿ | ಸಾವಯವ, ಸಮಗ್ರ ಕೃಷಿಯಲ್ಲಿ ಸಾಧನೆ

ಅರಣ್ಯ ಕೃಷಿ, ತರಕಾರಿ ಬೆಳೆದ ರೈತ

ಎಂ.ರಾಮಕೃಷ್ಣಪ್ಪ
Published 4 ಫೆಬ್ರುವರಿ 2024, 6:52 IST
Last Updated 4 ಫೆಬ್ರುವರಿ 2024, 6:52 IST
ಚಿಂತಾಮಣಿ ತಾಲ್ಲೂಕಿನ ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪನವರ ಸೋರೇಕಾಯಿ ತೋಟ
ಚಿಂತಾಮಣಿ ತಾಲ್ಲೂಕಿನ ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪನವರ ಸೋರೇಕಾಯಿ ತೋಟ   

ಚಿಂತಾಮಣಿ: ಸಾವಯವ ಕೃಷಿ ಪದ್ಧತಿ ಅಳವಡಿಸಿ ಅಭಿವೃದ್ಧಿ ಸಾಧಿಸಿರುವ ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿಯ ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಅವರ ತೋಟವನ್ನು ಸುತ್ತುಹಾಕಿ ಬರುವ ರೈತರ ಮೊಗದಲ್ಲಿ ಆತ್ಮವಿಶ್ವಾಸ, ಆಸಕ್ತಿ ಮೇಳೈಸುತ್ತದೆ. ಟೊಮೆಟೊ, ಕ್ಯಾಪ್ಸಿಕಂ, ಸೋರೆಕಾಯಿ, ಸೌತೆಕಾಯಿ, ಕ್ಯಾರೆಟ್ ಸೇರಿದಂತೆ ವಿವಿಧ ತರಕಾರಿ ಮತ್ತು ರೇಷ್ಮೆ ಬೆಳೆಯುತ್ತಾರೆ. ಜತೆಗೆ ಸೀಬೆ, ಮಾವು, ತೆಂಗು, ಜಂಬುನೇರಳೆ, ಹಲಸು ಬೆಳೆದಿದ್ದಾರೆ.

ಅನಾವೃಷ್ಟಿ, ರೋಗ, ಬೆಲೆ ಕುಸಿತ, ನಿರೀಕ್ಷಿತ ಆದಾಯವಿಲ್ಲ ಎಂದು ಕೃಷಿಯಿಂದ ವಿಮುಖರಾಗುತ್ತಿರುವುದು ಸಾಮಾನ್ಯವಾಗಿದೆ. ಬರದ ಸ್ಥಿತಿಯಲ್ಲೂ ಸರ್ಕಾರ ಹಾಗೂ ಕೃಷಿ ಇಲಾಖೆ ಪ್ರಶಸ್ತಿ ಪುರಸ್ಕೃತ ಮುನಿನಾರಾಯಣಪ್ಪ ಅವರ ತೋಟದಲ್ಲಿ ವಿವಿಧ ಬೆಳೆ ನಳನಳಿಸುತ್ತಿವೆ. ಕೃಷಿ ಮತ್ತು ಇತರೆ ಉಪಕಸುಬುಗಳಿಂದ ಲಕ್ಷಾಂತರ ಆದಾಯ ಗಳಿಸಿ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ.

ADVERTISEMENT

ಅವರ ಭೂಮಿಯಲ್ಲಿ ಅರಣ್ಯ ಪರಿಸರ ಸೃಷ್ಟಿಸಿದ್ದಾರೆ. ಹುಣಸೆ, ಜಂಬುನೇರಳೆ, ಹಲಸು, ಮಾವು, ತೆಂಗು ಮತ್ತಿತರ ಮರಗಳ ಮೂಲಕ ಅರಣ್ಯವಾಗಿದೆ. ಹಸು, ಕುರಿ, ಮೇಕೆ, ಕೋಳಿಗಳ ವಾಸಸ್ಥಾನವಾಗಿದೆ. ಹೈನುಗಾರಿಕೆಯ ಉಪ ಕಸುಬನ್ನು ಕೈಗೊಂಡಿದ್ದು ದಿನಕ್ಕೆ 40 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಾರೆ. ನಾಟಿ ಹಸುಗಳನ್ನು ಸಾಕಿದ್ದು, ಅದರ ಹಾಲನ್ನು ಮನೆಗೆ ಬಳಕೆ ಮಾಡಿಕೊಳ್ಳುತ್ತಾರೆ.

ಕೃಷಿಯಲ್ಲಿ ಎದುರಿಸುವ ತಾಂತ್ರಿಕ ಸಮಸ್ಯೆ, ಸಾವಯವ ಗೊಬ್ಬರದ ಮಹತ್ವ, ಕಡಿಮೆ ನೀರು ಬಳಸಿ ಅಧಿಕ ಇಳುವರಿ, ಸಮಗ್ರ ಕೃಷಿ ಪದ್ಧತಿ, ಉಪಕಸುಬುಗಳ ಕುರಿತು ಮುನಿನಾರಾಯಣಪ್ಪ ಪ್ರಾತ್ಯಕ್ಷಿಕೆ ರೂಪದಲ್ಲಿ ವಿವರಿಸುತ್ತಾರೆ. ಅವರ ಸಮಗ್ರ ಕೃಷಿ ಮತ್ತು ಉಪಕಸುಬುಗಳು ರೈತರಿಗೆ ಅನುಕರಣೀಯವಾಗಿವೆ.

ಸಾವಯವ ಹಾಗೂ ಶೂನ್ಯ ಬಂಡವಾಳದ ಸಮಗ್ರಕೃಷಿ ಕೃಷಿ ಪದ್ಧತಿಗೆ ಮರಳಬೇಕು. ತೋಟದಲ್ಲಿರುವ ಹುಣಸೆ, ಜಂಬುನೇರಳೆ, ತೆಂಗು, ಮಾವು, ಸೀಬೆ ಮರಗಳಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಕಡಿಮೆ ಖರ್ಚಿನಲ್ಲಿ ಲಾಭ ಪಡೆಯಬಹುದು ಎನ್ನುತ್ತಾರೆ ಮುನಿನಾರಾಯಣಪ್ಪ.

ಕಡಿಮೆ ಖರ್ಚಿನಲ್ಲಿ ರೇಷ್ಮೆ ಬೆಳೆ ಬೆಳೆದು ಲಾಭ ಮಾಡಿಕೊಳ್ಳಬಹುದು. ಕೃಷಿ ಇಲಾಖೆ ಸಹಕಾರ ಪಡೆದುಕೊಳ್ಳಬೇಕು. ಹೆಚ್ಚಿನ ಬೆಲೆ ದೊರೆಯಿತು ಎಂದು ಎಲ್ಲ ರೈತರು ಒಂದೇ ಬೆಳೆಗೆ ಮುಗಿಬೀಳಬಾರದು. ಇರುವ ಜಮೀನಿನಲ್ಲಿಯೇ ಬೇರೆ ಬೇರೆ ಬೆಳೆ ಬೆಳೆಯಬೇಕು ಎಂಬುದು ಅವರ ಅನುಭವದ ಮಾತು.

ಚಿಂತಾಮಣಿ ತಾಲ್ಲೂಕಿನ ಜಂಗಮಶೀಗೇಹಳ್ಳಿ ಮುನಿನಾರಾಯಣಪ್ಪನವರ ಸೀಬೆ ತೋಟ

2018-19ರಲ್ಲಿ ತಾಲ್ಲೂಕು ಮಟ್ಟದ ಪ್ರಗತಿಪರ ರೈತ ಹಾಗೂ 2022-23ರಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿಗೆ ಮುನಿನಾರಾಯಣಪ್ಪ ಭಾಜನರಾಗಿದ್ದಾರೆ.

ಮುನಿನಾರಾಯಣಪ್ಪ
ಬೆಂಬಲ ಬೆಲೆ ನೀಡಿ
ರೈತರ ಬದುಕು ಕಷ್ಟಕರ. ಕೂಲಿಯಾಳುಗಳ ಕೊರತೆ ಬೆಲೆ ಕುಸಿತ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದೆ ನಷ್ಟ ಅನುಭವಿಸುತ್ತಾರೆ. ಬಹುತೇಕ ಬೆಳೆಗಳಲ್ಲಿ ಹಾಕಿದ ಬಂಡವಾಳವೂ ಸಿಗುವುದಿಲ್ಲ. 10 ಬೆಳೆ ಬೆಳೆದರೆ ಒಂದರಲ್ಲಿ ಲಾಭ ಸಿಗುತ್ತದೆ. ಪ್ರತಿಯೊಂದು ಬೆಳೆಗೂ ಬೆಂಬಲ ಬೆಲೆ ನೀಡಬೇಕು - ಮುನಿನಾರಾಯಣಪ್ಪ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.