ADVERTISEMENT

ಚಿಕ್ಕಬಳ್ಳಾಪುರ | 22 ರಂದು ಪಂಚಾಯಿತಿ ನೌಕರರ ಧರಣಿ

ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 15:28 IST
Last Updated 19 ಜೂನ್ 2020, 15:28 IST

ಚಿಕ್ಕಬಳ್ಳಾಪುರ: ‘ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಮತ್ತು ಸಿಐಟಿಯು ಸಹಯೋಗದಲ್ಲಿ ಜೂನ್ 22 ರಂದು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗ್ರಾಮ ಪಂಚಾಯಿತಿ ನೌಕರರ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಪಾಪಣ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಇವತ್ತು ಗ್ರಾಮ ಪಂಚಾಯಿತಿ ನೌಕರರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

‘ಪಂಚಾಯಿತಿ ನೌಕರರ ಬಾಕಿ ಇರುವ ವೇತನವನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು. ಎಲ್ಲ ನೌಕರರಿಗೆ ಇಪಿಎಂಎಸ್ ಮುಖಾಂತರ ವೇತನ ನೀಡಬೇಕು. ನಿವೃತ್ತಿ ಹೊಂದಿರುವ ಹಾಗೂ ಮರಣ ಹೊಂದಿರುವ ನೌಕರರ ಬಾಕಿ ಇರುವ ಉಪಧನ ವೇತನವನ್ನು ನೀಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ’ ಎಂದು ಹೇಳಿದರು.

ADVERTISEMENT

‘ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ, ವೈದ್ಯಕೀಯ ವೆಚ್ಚ, ಸರಕಾರಿ ನೌಕರರಿಗೆ ನೀಡುವಂತೆ ಎಲ್ಲಾ ನೌಕರರಿಗೆ ನೀಡಬೇಕು. ಎಲ್ಲ ನೌಕರರಿಗೂ ಸೇವಾ ಪುಸ್ತಕ ತೆರೆಯಬೇಕು, ನೌಕರರನ್ನು ಪಂಚಾಯಿತಿಗಳಿಂದ ತೆಗೆಯುವ ಚಾಳಿ ಬಿಡಬೇಕು, ನಿಯಮಾವಳಿಗಳ ಪ್ರಕಾರ ನೌಕರರಿಗೆ ಕಡ್ಡಾಯ ಮುಂಬಡ್ತಿ ನೀಡಬೇಕು’ ಎಂದು ಆಗ್ರಹಿಸಿದರು.

‘ಪಂಚಾಯಿತಿ ನೌಕರರಿಂದ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಹೊಸ ಬಿಲ್ ಕಲೆಕ್ಟರ್‌ಗಳನ್ನು ನೇಮಕ ಮಾಡಬೇಕು. ಖಾಲಿ ಇರುವ ಹುದ್ದೆಗಳಿಗೆ ಜೇಷ್ಠತೆ ಆಧಾರದ ಮೇಲೆ ನೌಕರರಿಗೆ ನೀಡಬೇಕು. ಎಲ್ಲ ನೌಕರರಿಗೆ ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ವೇತನ ನೀಡಬೇಕು. ವಿಮೆಯ ಸೌಲಭ್ಯವನ್ನು ಒದಗಿಸಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಅಶ್ವತ್ಥಪ್ಪ, ಪದಾಧಿಕಾರಿಗಳಾದ ಶಂಕರಪ್ಪ, ಈಶ್ವರಪ್ಪ, ವೇಣುಗೋಪಾಲ್, ಮುಖಂಡರಾದ ಸತ್ಯನಾರಾಯಣ, ಆರ್.ಎನ್.ರಾಜು, ಎಚ್.ವೆಂಕಟರತ್ನಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.