ADVERTISEMENT

ಗೌರಿಬಿದನೂರು | ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಅಲೆದಾಟ

ಬಾಗಿಲು ಮುಚ್ಚಿದ ಖಾಸಗಿ ಕ್ಲಿನಿಕ್‌ಗಳು, ತುರ್ತು ಚಿಕಿತ್ಸೆಗೆ ಮಾತ್ರ ಸೀಮಿತವಾದ ಸರ್ಕಾರಿ ಆಸ್ಪತ್ರೆ

ಎ.ಎಸ್.ಜಗನ್ನಾಥ್
Published 3 ಏಪ್ರಿಲ್ 2020, 20:15 IST
Last Updated 3 ಏಪ್ರಿಲ್ 2020, 20:15 IST
ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆ
ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆ   

ಗೌರಿಬಿದನೂರು: ನಗರ ಸೇರಿದಂತೆ ತಾಲ್ಲೂಕಿನ ಜನತೆ ಕೊರೊನಾ ವೈರಸ್ ಭೀತಿ ಹೆಚ್ಚಿದ್ದೇ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ‌ ರೋಗಿಗಳಿಗೆ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನತೆಗೆ ತೊಂದರೆ ಅನುಭವಿಸುವಂತಾಗಿದೆ.

ಕಳೆದ 15 ದಿನಗಳ‌ ಹಿಂದೆ ನಗರದಲ್ಲಿ 10 ಕೋವಿಡ್‌ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಇಡೀ ತಾಲ್ಲೂಕು ಆಡಳಿತ ಚುರುಕುಗೊಂಡು ಲಾಕ್‌ಡೌನ್‌ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾದರೆ, ತಾಲ್ಲೂಕು ಆಸ್ಪತ್ರೆಯಲ್ಲಿನ ವೈದ್ಯರು ಒಳರೋಗಿಗಳನ್ನು ಖಾಲಿ ಮಾಡಿಸಿ, ಆಸ್ಪತ್ರೆಯನ್ನು ತುರ್ತು ಸೇವೆಗೆ ಮಾತ್ರ ಸೀಮಿತಗೊಳಿಸಿದ್ದಾರೆ.

ಇದೇ ವೇಳೆ ಖಾಸಗಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ಗಳೆಲ್ಲ ಕೊರೊನಾ ಭಯಕ್ಕೆ ಬಾಗಿಲು ಮುಚ್ಚಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೆ ಅನಾರೋಗ್ಯ ಪೀಡಿತರು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ‌ ಭಾರತೀಯ ಜನೌಷಧಿ ಕೇಂದ್ರವಿದೆ. ಲಾಕ್‌ಡೌನ್‌ ಕಾರಣಕ್ಕೆ ಅದರ ಪ್ರಯೋಜನ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ. ಸ್ಕ್ಯಾನಿಂಗ್ ಕೇಂದ್ರ ಸದ್ಯ ಬಾಗಿಲು ಮುಚ್ಚಿದೆ. ಕುಡಿಯುವ ನೀರಿನ ಸಮಸ್ಯೆಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಈ ಆಸ್ಪತ್ರೆಯಲ್ಲಿ ತಲಾ ಒಂದು ವೆಂಟಿಲೇಟರ್, ಡಯಾಲಿಸಿಸ್‌ ಘಟಕಗಳಿವೆ. ಎರಡು ಹಾಸಿಗೆಯ ತುರ್ತು ನಿಗಾ ಘಟಕವಿದೆ. ರಕ್ತ ಪರೀಕ್ಷೆ ಪ್ರಯೋಗಾಲಯ, ಎಕ್ಸ್‌ರೆ ಸೇವೆಗಳಿವೆ.

ಕೋವಿಡ್‌ ಸೋಂಕಿತರ ಸಂಪರ್ಕದಲ್ಲಿದ್ದ ಸುಮಾರು 24 ಮಂದಿಯನ್ನು ಆರಂಭದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು‌ ದಿನದ ಮಟ್ಟಿಗೆ ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು. ಅಂದಿನಿಂದ ಹೊರ ರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ಆಸ್ಪತ್ರೆಗೆ ಬಂದವರಿಗೂ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಸಾರ್ವತ್ರಿಕವಾಗಿವೆ.

ಈ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಅವರನ್ನು ವಿಚಾರಿಸಿದರೆ, ‘ಸದ್ಯ ತುರ್ತು ಸೇವೆ ಮಾತ್ರ ನಮ್ಮಲ್ಲಿ ಲಭ್ಯವಿದೆ. ಜ್ವರ, ತಲೆನೋವು, ನೆಗಡಿ, ಕೆಮ್ಮು ‌ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪೀವರ್ ಕ್ಲೀನಿಕ್ ಆರಂಭಿಸಲಾಗಿದೆ’ ಎಂದು ಹೇಳಿದರು.

ಇನ್ನು, ನಗರದ ಹೊರವಲಯದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಸ್ತುತ ಗರ್ಭಿಣಿ ಮತ್ತು ಬಾಣಂತಿಯರಿಗೆ ಸೇವೆ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಕೊರೊನಾ ಭೀತಿಗೆ ಆ ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಕ್ಷಿಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.