ಚಿಂತಾಮಣಿ (ಚಿಕ್ಕಬಳ್ಳಾಪುರ): ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರ ಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಭರವಸೆ ನೀಡಿದರು.
ಲಿಯೊ ಕ್ಲಬ್ ಆಫ್ ಮಾರ್ಗ್ ಮತ್ತು ಅನಿತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಹೊರವಲಯದ ಚಿನ್ನಸಂದ್ರದ ಬಳಿ ಸೋಮವಾರ ಆಯೋಜಿಸಲಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ರಾಷ್ಟ್ರಕವಿ ಕುವೆಂಪು ಮತ್ತು ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ, ಮೂರು ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ನ್ಯಾ. ವಿ. ಗೋಪಾಲಗೌಡ ಮನವಿ ಮಾಡಿದರು. ಆಗ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು.
‘ಕರ್ನಾಟಕ ಮತ್ತು ಆಂಧ್ರಪ್ರದೇಶದ ಮಧ್ಯೆ ಸುಮಾರು ದಶಕಗಳಿಂದ ಸ್ನೇಹ ಮತ್ತು ಸಹಕಾರವಿದೆ. ಆಂಧ್ರಪ್ರದೇಶದ ಸತ್ಯಸಾಯಿ ಮತ್ತು ಕರ್ನೂಲು ಜಿಲ್ಲೆಗಳ 57 ಶಾಲೆಗಳಲ್ಲಿ ಇಂದಿಗೂ ಕನ್ನಡ ಭಾಷೆ ಕಲಿಕೆಗೆ ಅವಕಾಶವಿದೆ’ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಿಳಿಸಿದರು.
‘ಇತ್ತೀಚೆಗೆ ಆಂಧ್ರಪ್ರದೇಶದಲ್ಲಿಪುಂಡಾನೆಗಳನ್ನು ಪಳಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸಾಕಾನೆಗಳನ್ನು ಕೊಡುಗೆಯಾಗಿ ನೀಡಿದೆ. ಈ ಸಂದರ್ಭದಲ್ಲಿ ಶ್ರೀಶೈಲದಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಂತೆ ಕರ್ನಾಟಕದ ಸಚಿವರು ಮನವಿ ಮಾಡಿದ್ದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಲಾಗಿದೆ’ ಎಂದರು.
‘ಕರ್ನಾಟಕವು ಸಂಸ್ಕೃತಿ, ಪರಂಪರೆ ಹೊಂದಿರುವ ನಾಡು. ಭಾಷೆ, ಕಲೆ, ಸಾಹಿತ್ಯ, ಸಂಗೀತ, ಚಲನಚಿತ್ರ ಮನಸ್ಸುಗಳನ್ನು ಒಂದುಗೂಡಿಸುವ ಸೇತುವೆಗಳಾಗಬೇಕು. ನಾವೆಲ್ಲ ಭಾರತೀಯ ಮಾತೆ ಮಕ್ಕಳು. ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ, ಸಂಸ್ಕಾರವನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಚಲನಚಿತ್ರಗಳು ಮೌಲ್ಯಗಳನ್ನು ಅರಿಯುವ ಮಾದ್ಯಮವಾಗಿವೆ. ಇದು ನಮ್ಮ ಜೀವನದ ಭಾಗವಾಗಬೇಕು. ಭಾಷೆ, ಕುಲ, ಮತಗಳನ್ನು ದಾಟಿ ಭಾರತೀಯರಾಗಿ ಮುಂದುವರೆಯಬೇಕು’ ಎಂದರು.
ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಧೈರ್ಯ ಮತ್ತು ಬದ್ಧತೆ ಉಳ್ಳವರಾಗಿದ್ದಾರೆ. ಅವರ ಸಿದ್ಧಾಂತಗಳು ಜನಸೇವಾ ಸಿದ್ಧಾಂತಗಳಿಗೆ ಸಹಕಾರಿಯಾಗಿವೆ. ಬಡವರು, ಯುವಕರು, ಮಹಿಳೆಯರು, ಕಾರ್ಮಿಕರು, ರೈತರಿಗೆ ಸಹಕಾರ ನೀಡುವ ಹಾಗೂ ಪರಿಸರ ರಕ್ಷಣೆಗೆ ದಾರಿದೀಪವಾಗಿದ್ದಾರೆ ಎಂದು ಕೊಂಡಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.