ADVERTISEMENT

ಪಡಿತರ ಚೀಟಿ: ದಂಡ ಪಾವತಿಗೆ ನಕಾರ

ಆಹಾರ ಇಲಾಖೆಯಿಂದ ನೋಟಿಸ್ l 31 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು

ಡಿ.ಎಂ.ಕುರ್ಕೆ ಪ್ರಶಾಂತ
Published 12 ಆಗಸ್ಟ್ 2021, 5:27 IST
Last Updated 12 ಆಗಸ್ಟ್ 2021, 5:27 IST
.
.   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೆಲವರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲದಿದ್ದರೂ ಈ ಕಾರ್ಡ್‌ಗಳನ್ನು ಪಡೆದಿದ್ದಾರೆ. ಇಂತಹವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೀಗೆ ನಿಯಮ ಉಲ್ಲಂಘಿಸಿ ಆ ಫಲಾನುಭವಿ ಪಡೆದ ಪದಾರ್ಥಗಳ ಮಾರುಕಟ್ಟೆ ಮೌಲ್ಯವನ್ನು ಅವರಿಂದ ದಂಡದ ರೂಪದಲ್ಲಿ ವಸೂಲಿ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.

ದಂಡ ಪಾವತಿಸುವಂತೆ ನಿಯಮ ಉಲ್ಲಂಘಿಸಿದವರಿಗೆ ಜಿಲ್ಲೆಯ ಅಧಿಕಾರಿಗಳು ನೋಟಿಸ್ ಸಹ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಬಳಕೆ ಮಾಡಿಕೊಂಡವರು ದಂಡದ ಹಣ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರಿ ನೌಕರರು, ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚು ಆದಾಯವುಳ್ಳವರು, ಮೂರು ಹೆಕ್ಟೇರ್‌ ಮಿತಿಗಿಂತ ಹೆಚ್ಚು ಜಮೀನು ಹೊಂದಿದ್ದವರು, ಆದಾಯ ತೆರಿಗೆ ಪಾವತಿಸುವವರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದರು. ಸರ್ಕಾರದ ಕಾರ್ಯಾಚರಣೆಯ ಫಲವಾಗಿ ಸಾವಿರಾರು ಪಡಿತರ ಚೀಟಿಗಳು ಎಪಿಎಲ್‌ಗೆ ಪರಿವರ್ತನೆ ಆಗಿವೆ.

ADVERTISEMENT

ಇಲ್ಲಿಯವರೆಗೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದವರು ದಂಡ ಪಾವತಿಸಬೇಕು. ಆದರೆ, ದಂಡದ ಹಣ ಪಾವತಿಗೆ ನೋಟಿಸ್ ನೀಡಿದರೂ ಜಪ್ಪಯ್ಯ ಎನ್ನುತ್ತಿಲ್ಲ.

ಮತ್ತೊಂದು ಕಡೆ ‘ಬಿಪಿಎಲ್ ರದ್ದು ಏಕೆ ಮಾಡಿದ್ದೀರಿ. ದಂಡ ಪಾವತಿಸುವುದಿಲ್ಲ’ ಎಂದು ಕೆಲವರು ಸ್ಥಳೀಯ ರಾಜಕೀಯ ನಾಯಕರಿಂದ ಅಧಿಕಾರಿಗಳ ಮೇಲೆ ಒತ್ತಡ ಸಹ ಹಾಕಿ ಸುತ್ತಿದ್ದಾರೆ. ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಯನ್ನು ಪ‍ಡೆದಿದ್ದ 31 ಸರ್ಕಾರಿ ನೌಕರರ ಚೀಟಿಗಳು ರದ್ದಾಗಿದ್ದು, ಇವು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಆಗಿವೆ. ಈ ಸರ್ಕಾರಿ ನೌಕರರಿಗೂ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ಬಾಗೇಪಲ್ಲಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ತಲಾ ಐದು, ಚಿಂತಾಮಣಿ ಹನ್ನೊಂದು, ಗೌರಿಬಿದನೂರು ಆರು, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕಿನ ತಲಾ ಇಬ್ಬರು ಸರ್ಕಾರಿ ನೌಕರರು ಅಂತ್ಯೋದಯ ಮತ್ತು ಎಪಿಎಲ್ ಪಡಿತರ ಚೀಟಿಗಳನ್ನು ಪಡೆದಿದ್ದರು. ಸರ್ಕಾರಿ ನೌಕರರು ದಂಡ ಪಾವತಿಸದಿದ್ದರೆ ಅವರ ಎಫ್‌ಐಆರ್‌ ಸಹ ದಾಖಲಿಸಬಹುದು.

ಆದಾಯ ತೆರಿಗೆ: ಒಂದು ಕುಟುಂಬದ ಒಬ್ಬ ‍ಪಡಿತರದಾರ ಆದಾಯ ತೆರಿಗೆ ಪಾವತಿಸಿದರೂ ಅವರು ಅಂತ್ಯೋದಯ ಮತ್ತು ಬಿಪಿಎಲ್ ಮಾನದಂಡದಿಂದ ಹೊರಗೆ ಉಳಿಯುವರು. ಹೀಗೆ ಜಿಲ್ಲೆಯಲ್ಲಿ ಆದಾಯ ತೆರಿಗೆ ಪಾವತಿಗೆ ಸೇರಿದ್ದ 2,465 ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಆಗಿ ಬದಲಾಗಿವೆ.

ಜಮೀನ್ದಾರರ ಕೈಯಲ್ಲೂ ಅಂತ್ಯೋ ದಯ: ಮೂರು ಹೆಕ್ಟೇರ್ ಜಮೀನು ಹೊಂದಿರುವವರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರು. ಆದರೆ ಸರ್ಕಾರದ ನಿಯಮಗಳನ್ನು ಮುರಿದು ಈ ಜಮೀನ್ದಾರರು ಅಂತ್ಯೋದಯ ಚೀಟಿಗಳನ್ನೇ ಪಡೆದಿದ್ದಾರೆ. ಜಿಲ್ಲೆಯಲ್ಲಿ ಹೀಗೆ ಹೆಕ್ಟೇರ್‌ಗೂ ಹೆಚ್ಚು ಜಮೀನು ಹೊಂದಿರುವ 304 ಅಂತ್ಯೋದಯ, 2,058 ಬಿಪಿಎಲ್ ಪಡಿತರ ಚೀಟಿಗಳು ಈಗ ಎಪಿಎಲ್‌ಗೆ ಪರಿವರ್ತನೆ ಆಗಿವೆ.

ಬ್ಯಾಂಕ್ ಸಾಲಕ್ಕಾಗಿ ಎಡವಟ್ಟು: ಆದಾಯ ತೆರಿಗೆ ಪಾವತಿ ಹಿನ್ನೆಲೆಯಲ್ಲಿ 2,465 ಪಡಿತರ ಚೀಟಿಗಳು ಎಪಿಎಲ್ ಕಾರ್ಡ್‌ಗಳಾಗಿ ಬದಲಾಗಿವೆ. ಆದರೆ, ಬ್ಯಾಂಕ್‌ಗಳಿಂದ ಸಾಲ ಪಡೆಯಲು ರೂಪಿಸಿದ ದಾಖಲೆಗಳೇ ಕೆಲವರ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳು ಕೈತಪ್ಪುವಂತೆ ಆಗಿದೆ.

ಆದಾಯ ತೆರಿಗೆ ಪಾವತಿಯ ದಾಖಲೆಗಳು ಇದ್ದರೆ ಬ್ಯಾಂಕ್‌ಗಳಿಂದ ಸಾಲ ಸುಲಭವಾಗಿ ದೊರೆಯುತ್ತದೆ. ಈ ಕಾರಣದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕೆಲವು ಕುಟುಂಬಗಳಲ್ಲಿ ಯಾರಾದರೊಬ್ಬರು ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ. ಇವರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಸರ್ಕಾರದ ನಿಯಮಗಳ ಪ್ರಕಾರ ಅವರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಇಂತಹ ಪ್ರಕರಣಗಳು ಸಹ ಜಿಲ್ಲೆಯಲ್ಲಿವೆ. ತಪ್ಪಾಗಿದೆ ಎಂದು ಬರುತ್ತಿದ್ದಾರೆ. ಇಂತಹವರಿಗೆ ಕೇಂದ್ರ ಕಚೇರಿ ಸಂಪರ್ಕಿ ಸುವಂತೆ ತಿಳಿಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ‍ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಸ್ವಯಂ ಪ್ರೇರಿತರಾಗಿ ಬಂದಿದ್ದು ಕಡಿಮೆ

ಅರ್ಹರಲ್ಲದಿದ್ದರೂ ಅಂತ್ಯೋದಯ ಮತ್ತು ಬಿ‍ಪಿಎಲ್ ಪಡಿತರ ಚೀಟಿಯನ್ನು ಹಲವರು ಪಡೆದಿದ್ದಾರೆ. ಆದರೆ, ಸರ್ಕಾರದ ಆದೇಶದ ನಂತರ ಸ್ವಯಂ ಪ್ರೇರಿತರಾಗಿ ಬಂದು ಪಡಿತರ ಚೀಟಿಗಳನ್ನು ನಮ್ಮ ವಶಕ್ಕೆ ನೀಡಿದವರು ಕಡಿಮೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕಿ ಪಿ. ಸವಿತಾ.

ಆದಾಯ ತೆರಿಗೆ ಪಾವತಿಸುತ್ತಿದ್ದವರನ್ನು ಸರ್ಕಾರವೇ ಗುರುತಿಸಿ ಆ ಪಟ್ಟಿಯನ್ನು ನಮಗೆ ಕಳುಹಿಸಿದೆ. ಆ ಪ್ರಕಾರ ಅಂತಹ ಪಡಿತರ ಚೀಟಿಗಳು ಎಪಿಎಲ್‌ಗೆ ಬದಲಾಗಿವೆ. ಕೆಲವು ಯೋಜನೆಗಳು ಅಥವಾ ಸೌಲಭ್ಯ ಪಡೆಯುವಾಗ ಆಧಾರ್ ಲಿಂಕ್ ಆಗಿರುತ್ತದೆ. ನಿಯಮಗಳನ್ನು ಉಲ್ಲಂಘಿಸಿ ಪಡಿತರ ಚೀಟಿ ಪಡೆದಿದ್ದವರು ಒಂದಲ್ಲಾ ಒಂದು ಕಡೆ ಕಣ್ಣಿಗೆ ಬೀಳುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.