ADVERTISEMENT

ಪೆನ್ಸಿಲ್ ಸ್ಕೆಚ್ ಕಲಾವಿದನ ಅತಂತ್ರ ಬದುಕು

ಡಿ.ಜಿ.ಮಲ್ಲಿಕಾರ್ಜುನ
Published 14 ಡಿಸೆಂಬರ್ 2020, 4:41 IST
Last Updated 14 ಡಿಸೆಂಬರ್ 2020, 4:41 IST
ಶಿಡ್ಲಘಟ್ಟದಲ್ಲಿ ಪೆನ್ಸಿಲ್ ಸ್ಕೆಚ್ ಮೂಲಕ ವ್ಯಕ್ತಿಯೊಬ್ಬರ ಚಿತ್ರ ರಚಿಸುತ್ತಿರುವ ಕಲಾವಿದ ಅಂಜನಮೂರ್ತಿ
ಶಿಡ್ಲಘಟ್ಟದಲ್ಲಿ ಪೆನ್ಸಿಲ್ ಸ್ಕೆಚ್ ಮೂಲಕ ವ್ಯಕ್ತಿಯೊಬ್ಬರ ಚಿತ್ರ ರಚಿಸುತ್ತಿರುವ ಕಲಾವಿದ ಅಂಜನಮೂರ್ತಿ   

ಶಿಡ್ಲಘಟ್ಟ: ಕೊರೊನಾ ಪರಿಣಾಮ ಒಂದೆಡೆ ಪ್ರವಾಸಿ ತಾಣಗಳು ಸೊರಗಿದ್ದರೆ, ಮತ್ತೊಂದೆಡೆ ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಹಲವಾರು ಮಂದಿ ಕೂಡ ಅತಂತ್ರರಾಗಿದ್ದಾರೆ. ಅವರಲ್ಲಿ ಕಲಾವಿದರೂ ಸೇರಿದ್ದಾರೆ.

ಪೆನ್ಸಿಲ್ ಸ್ಕೆಚ್ ಮೂಲಕ ಪ್ರವಾಸಿಗರ ಭಾವಚಿತ್ರ ರಚಿಸಿ ಬದುಕನ್ನು ಕಂಡುಕೊಂಡಿದ್ದ ಅಂಜನಮೂರ್ತಿ ಎಂಬ ಕಲಾವಿದ ಇದೀಗ ಶಿಡ್ಲಘಟ್ಟದಲ್ಲಿ ಭುಜಕ್ಕೆ ಬ್ಯಾಗೊಂದನ್ನು ನೇತುಹಾಕಿಕೊಂಡು ಸುತ್ತಾಡುತ್ತಿದ್ದಾರೆ. ಕಲೆಯನ್ನು ಪ್ರೋತ್ಸಾಹಿಸುವ ಕೆಲವಾರು ವ್ಯಕ್ತಿಗಳ ಭಾವಚಿತ್ರ ರಚಿಸಿಕೊಡುತ್ತಾ ಅವರು ನೀಡುವ ಹಣವನ್ನು ಪಡೆಯುತ್ತಿದ್ದಾರೆ.

ಅಂಜನಮೂರ್ತಿ ಹಿಂದೂಪುರದ ವಾಸಿ. ಶಿಕ್ಷಣ ಪಡೆದಿಲ್ಲ. ನಾಟಕದ ಸೀನ್‌ಗಳನ್ನು ಚಿತ್ರಿಸುತ್ತಿದ್ದ ತನ್ನ ತಂದೆ ಲಕ್ಷ್ಮಯ್ಯ ಅವರಿಂದ ಪ್ರೇರಣೆ ಪಡೆದು ದೇವರು, ಪ್ರಕೃತಿ, ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳ ಚಿತ್ರಗಳನ್ನು ಪೆನ್ಸಿಲ್ ಸ್ಕೆಚ್ ಮೂಲಕ ಮಾಡತೊಡಗಿದರು. ಅದೇ ಮುಂದೆ ಅವರಿಗೆ ಜೀವನೋಪಾಯವಾಯಿತು.

ADVERTISEMENT

‘ಪೆನ್ಸಿಲ್ ಸ್ಕೆಚ್ ಮೂಲಕ ಕೇವಲ 10-15 ನಿಮಿಷಗಳಲ್ಲಿ ಒಂದು ಚಿತ್ರವನ್ನು ಎ4 ಡ್ರಾಯಿಂಗ್ ಪೇಪರ್ ನಲ್ಲಿ ಬರೆಯುತ್ತೇನೆ. ಪೆನ್ಸಿಲ್ 10ಬಿ , 6ಬಿ, 4ಬಿ ಬಳಸುತ್ತೇನೆ. ಕಳೆದ 25 ವರ್ಷಗಳಿಂದ ಈ ಕಲೆಯಿಂದ ಜೀವನ ಸಾಗಿಸುತ್ತಿದ್ದೇನೆ. ನನಗೆ ನಾಲ್ವರು ಹೆಣ್ಣುಮಕ್ಕಳು. ಒಬ್ಬಳಿಗೆ ಮದುವೆ ಆಗಿದೆ. ಇನ್ನೂ ಮೂವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನನ್ನ ಈ ಕಲೆಯಿಂದ ಬರುವ ಆದಾಯವೇ ನನ್ನ ಕುಟುಂಬಕ್ಕೆ ಆಧಾರ’ ಎನ್ನುತ್ತಾರೆ
ಅಂಜನಮೂರ್ತಿ.

‘ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಅನೇಕ ಪ್ರೇಕ್ಷಣೀಯ ಸ್ಥಳಗಳು, ಜಾತ್ರೆ, ದೇವಸ್ಥಾನ ಮತ್ತು ಸಮ್ಮೇಳನ ನಡೆಯುವ ಜಾಗಗಳಿಗೆ ಹೋಗಿ ಅಲ್ಲಿನ ಜನಗಳಿಗೆ ಅವರ ಚಿತ್ರವನ್ನು ಸ್ಥಳದಲ್ಲೇ ಬರೆದುಕೊಡುತ್ತೇನೆ. ಅವರು ₹ 50ರಿಂದ ₹ 100 ಕೊಡುತ್ತಾರೆ. ನಾನು ಶಾಲೆಗೆ ಹೋಗಿಲ್ಲ. ಆದರೆ, ಕನ್ನಡ ಓದಲು ಮತ್ತು ಬರೆಯಲು ಕಲಿತಿದ್ದೇನೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆ ಮಾತಾಡುತ್ತೇನೆ. ಕೊರೊನಾ ಪ್ರಾರಂಭವಾದಾಗಿನಿಂದ ಜನಸಂದಣಿ ಸೇರುವ ಜಾತ್ರೆ ಮೊದಲಾದ ಕಾರ್ಯಕ್ರಮಗಳು ನಡೆಯದೆ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಇಲ್ಲದೆ ನನ್ನ ಹೊಟ್ಟೆಪಾಡಿಗೆ ಕಷ್ಟವಾಗಿದೆ. ಇದೀಗ ಚಿಕ್ಕಬಳ್ಳಾಪುರದಲ್ಲಿ ರೂಮ್‌ವೊಂದರಲ್ಲಿ ಉಳಿದಿದ್ದು, ಜಿಲ್ಲೆಯೆಲ್ಲಾ ಸುತ್ತಾಡುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.