ADVERTISEMENT

ಜನಜಾಗೃತಿ ಮೂಡಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:30 IST
Last Updated 12 ನವೆಂಬರ್ 2020, 6:30 IST
ಶಿಡ್ಲಘಟ್ಟದ ಬಸ್‌ನಿಲ್ದಾಣ ಬಳಿ ಪೊಲೀಸರು ಕೋವಿಡ್---19 ತಡೆಗಟ್ಟುವಿಕೆ ಹಾಗೂ ಹೊಸದಾಗಿ ಜಾರಿಗೆ ಬಂದಿರುವ ಸಹಾಯವಾಣಿ ಸಂಖ್ಯೆ ಕುರಿತು ಜನರಲ್ಲಿ ಅರಿವು ಮೂಡಿಸಿದರು
ಶಿಡ್ಲಘಟ್ಟದ ಬಸ್‌ನಿಲ್ದಾಣ ಬಳಿ ಪೊಲೀಸರು ಕೋವಿಡ್---19 ತಡೆಗಟ್ಟುವಿಕೆ ಹಾಗೂ ಹೊಸದಾಗಿ ಜಾರಿಗೆ ಬಂದಿರುವ ಸಹಾಯವಾಣಿ ಸಂಖ್ಯೆ ಕುರಿತು ಜನರಲ್ಲಿ ಅರಿವು ಮೂಡಿಸಿದರು   

ಶಿಡ್ಲಘಟ್ಟ: ‘ಕೊರೊನಾ ಸೋಂಕು ತಡೆಗೆ ಕಡ್ಡಾಯವಾಗಿ ಸಾರ್ವಜನಿಕರು ಓಡಾಡುವಾಗ ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ನಿಯಮಿತವಾಗಿ ಕೈ, ಬಾಯಿ ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಮಾಡಿಕೊಳ್ಳಬೇಕು’ ಎಂದು ನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸತೀಶ್ ಸಲಹೆ ನೀಡಿದರು.

ನಗರದ ಬಸ್‌ನಿಲ್ದಾಣ ಬಳಿ ಬುಧವಾರ ಕೋವಿಡ್-19 ಸೋಂಕು ತಡೆಗಟ್ಟುವಿಕೆ ಹಾಗೂ ಪೊಲೀಸರ ಸಂಪರ್ಕಕ್ಕಾಗಿ ಹೊಸದಾಗಿ ಜಾರಿಗೆ ಬಂದಿರುವ 112 ಸಹಾಯವಾಣಿ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದೇ ಭಾರತ ಒಂದೇ ತುರ್ತು ಕರೆ ಪರಿಕಲ್ಪನೆಯ ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆಯನ್ನು ಕೇಂದ್ರ ಗೃಹ ಇಲಾಖೆಯು ಜಾರಿಗೆ ತಂದಿದೆ. ಸಾರ್ವಜನಿಕರು ತುರ್ತು ಕರೆಗಾಗಿ ಪೊಲೀಸರ ನೆರವು ಪಡೆಯಲು 112 ಸಂಖ್ಯೆಗೆ ಡಯಲ್ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಪೊಲೀಸ್ ನೆರವು, ಅಗ್ನಿಶಾಮಕದಳದ ನೆರವು ಅಥವಾ ಆಂಬುಲೆನ್ಸ್ ಸೇವೆ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಎಮೆರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂನಡಿ ಎಲ್ಲಿಂದಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿಸಿ ರಕ್ಷಣೆ ಒದಗಿಸಲು ಅನುಕೂಲವಾಗಲಿದೆ.112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕೀಕೃತ ತುರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15ರಿಂದ 17 ನಿಮಿಷದಲ್ಲಿ ವಾಹನ ತಲುಪುತ್ತದೆ ಎಂದು ಹೇಳಿದರು.

ಎಎಸ್ಐ ನವಾಜ್ ಅಹಮದ್, ಹೆಡ್‌ ಕಾನ್‌ಸ್ಟೆಬಲ್ ಮಂಜುನಾಥ ಗುಪ್ತ, ಕಾನ್‌ಸ್ಟೆಬಲ್ ಶಶಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.