ADVERTISEMENT

ಜ್ಞಾನಾರ್ಜನೆಗೆ ಪರಿಶ್ರಮ, ಗುರಿ ಮುಖ್ಯ: ಡಾ.ಕೆ.ಸುಧಾಕರ್

ಭಾರತಿ ವಿದ್ಯಾ ಸಂಸ್ಥೆಯಲ್ಲಿ ಹೊನಲು ಬೆಳಕಿನ ‘ಭಾರತಿ ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 10:19 IST
Last Updated 31 ಜನವರಿ 2020, 10:19 IST
ಶಾಲೆಗೆ ದಾನಿಗಳು ನೀಡಿದ ತಿಜೋರಿಗಳನ್ನು ಶಾಸಕ ಡಾ.ಕೆ.ಸುಧಾಕರ್ ಅವರು ಉದ್ಘಾಟಿಸಿದರು.
ಶಾಲೆಗೆ ದಾನಿಗಳು ನೀಡಿದ ತಿಜೋರಿಗಳನ್ನು ಶಾಸಕ ಡಾ.ಕೆ.ಸುಧಾಕರ್ ಅವರು ಉದ್ಘಾಟಿಸಿದರು.   

ಚಿಕ್ಕಬಳ್ಳಾಪುರ: ‘ಜ್ಞಾನ ಮತ್ತು ಕೀರ್ತಿಯನ್ನು ನಾವೇ ಗಳಿಸಿಕೊಳ್ಳಬೇಕೇ ವಿನಾ ಯಾರಿಂದಲೂ ಬಳುವಳಿಯಾಗಿ ಬರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಪರಿಶ್ರಮ, ಗುರಿ ಇಟ್ಟುಕೊಂಡು ಜ್ಞಾನಾರ್ಜನೆ ಮಾಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ 41ನೇ ವರ್ಷದ ಹೊನಲು ಬೆಳಕಿನ ಭಾರತಿ ಸಾಂಸ್ಕೃತಿಕ ಸಂಗಮ- ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾವು ಯಾವ ಶಾಲೆಯಲ್ಲಿ, ಯಾವ ಮಾಧ್ಯಮದಲ್ಲಿ ಓದುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ನಮ್ಮ ಪರಿಶ್ರಮ, ಗುರಿಯಿಂದ, ಶಾಲೆ ಕಲಿಸಿದ ಶಿಸ್ತಿನಿಂದ ಸಂಯಮದಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ಜ್ಞಾನಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಆದರೆ ಜ್ಞಾನವನ್ನು ನಾವೇ ಕಷ್ಟಪಟ್ಟು ಸ್ವಯಾರ್ಜನೆ ಮಾಡಿಕೊಳ್ಳುವತ್ತ ನಮ್ಮ ಚಿತ್ತ ನೆಟ್ಟಿರಬೇಕು’ ಎಂದು ತಿಳಿಸಿದರು.

ADVERTISEMENT

‘ನಮಗೆ ಕ್ರಿಶ್ಚಿಯನ್, ಇಸ್ಲಾಂ ಸೇರಿದಂತೆ ಎಲ್ಲ ಧರ್ಮಗಳ ಇತಿಹಾಸ, ಚರಿತ್ರೆ ಗೊತ್ತಿದೆ. ಆದರೆ ಹಿಂದೂ ಧರ್ಮ ಇತಿಹಾಸ ನಾಗರಿಕತೆಯ ಉಗಮದೊಂದಿಗೆ ಆರಂಭವಾಗುತ್ತದೆ. ಹಿಂದೂ ಒಂದು ಜಾತಿಯಲ್ಲ. ಜೀವನದ ಒಂದು ಕ್ರಿಯೆ. ನಮಗೆ ನೀತಿ ಮುಖ್ಯವೇ ಹೊರತು ಜಾತಿ ಮುಖ್ಯವಲ್ಲ. ಎಲ್ಲರನ್ನೂ ಪ್ರೀತಿಸುವುದು, ಗೌರವಿಸುವುದು, ಸಹಬಾಳ್ವೆಯಿಂದ ನಡೆದುಕೊಳ್ಳುವುದು ನಮ್ಮ ಸಂಸ್ಕೃತಿ. ಧರ್ಮ ಬೇರೆ ಧರ್ಮಗಳನ್ನು ನಾವು ಹೀಯಾಳಿಸುವುದಲ್ಲ’ ಎಂದರು.

ಶಾಲೆಯ ಮುಖ್ಯಸ್ಥ ವೇಣುಗೋಪಾಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಹಿರಿಯ ವಕೀಲ ಸೂರ್ಯನಾರಾಯಣರಾವ್, ಮುಖಂಡರಾದ ಸುರೇಂದ್ರ ಗೌಡ, ಸಂದೀಪ್ ರೆಡ್ಡಿ, ಗಂಗಾಧರಮೂರ್ತಿ, ಬಿ.ಕೆ.ಮಂಜುನಾಥ್, ಮುನಿಕೃಷ್ಣಪ್ಪ, ಪರಮೇಶ್ವರ್, ವಿನಯಾನಂದ, ಕೆ.ರಾಮು, ಆರ್.ವಿ.ದೇವರಾಜ್, ಚಂದ್ರಶೇಖರ್, ಮುನಿಕೃಷ್ಣ, ವಸಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.