
ಚಿಕ್ಕಬಳ್ಳಾಪುರ: ‘ವಾಹನ ನಿಲುಗಡೆ ಸ್ಥಳದಲ್ಲಿ ಮಾಲೀಕರು ಸಾಕು ನಾಯಿಗಳನ್ನು ಬಿಟ್ಟು ಪರಾರಿ ಆಗುತ್ತಿದ್ದಾರೆ. ಆ ನಾಯಿಗಳಿಗೂ ಮತ್ತು ಬೆಟ್ಟದಲ್ಲಿರುವ ಸ್ಥಳೀಯ ನಾಯಿಗಳಿಗೂ ಸಂಘರ್ಷ ಉಂಟಾಗುತ್ತದೆ’–ಇದು ಪ್ರಸಿದ್ಧ ನಂದಿಗಿರಿಧಾಮದ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಸಿಬ್ಬಂದಿಯೊಬ್ಬರ ಬೇಸರದ ನುಡಿ.
ನಂದಿಗಿರಿಧಾಮದಲ್ಲಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆಯೇ ಪ್ರವಾಸಕ್ಕೆ ಬರುವ ಕೆಲವರು ತಾವು ಸಾಕಿದ ನಾಯಿಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆಯಾದ ವೇಳೆ ಕೆಲವರು ನಾಯಿಗಳನ್ನು ಕೊಂಡೊಯ್ಯುವುದಿಲ್ಲ. ಅಂತಹ ನಾಯಿಗಳನ್ನು ಪ್ರವಾಸದ ನೆಪದಲ್ಲಿ ಇಲ್ಲಿಗೆ ಬಂದು ಬಿಟ್ಟು ಪರಾರಿ ಆಗುತ್ತಿದ್ದಾರೆ. ಕಾಯಿಲೆಗಳು ಬಂದ ನಾಯಿಗಳು, ಹೆಚ್ಚು ಮರಿಗಳು ಇದ್ದರೆ ಅಂತಹವುಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಡಲಾಗುತ್ತಿದೆ.
ಪ್ರವಾಸಿಗರ ಈ ಕೃತ್ಯ ಗಿರಿಧಾಮದ ನಿರ್ವಹಣೆಯ ಹೊಣೆ ಹೊತ್ತಿರುವ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತಲೆನೋವು ತಂದಿದೆ. ಗಿರಿಧಾಮದಲ್ಲಿ ಈಗಾಗಲೇ ಬೀದಿ ನಾಯಿಗಳು ಇವೆ.
‘ಬೀದಿ ನಾಯಿಗಳು ಮತ್ತು ಈ ಸಾಕು ನಾಯಿಗಳ ನಡುವೆ ಘರ್ಷಣೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ವಾಹನ ನಿಲುಗಡೆ ಸ್ಥಳದಲ್ಲಿ ಕಾರುಗಳನ್ನು ನಿಲ್ಲಿಸಿರುತ್ತಾರೆ. ಬೆಟ್ಟದಿಂದ ವಾಪಸ್ ತೆರಳುವಾಗ ಈ ನಾಯಿಗಳನ್ನು ಬಿಟ್ಟು ಹೋಗುವರು. ಕೆಲವರು ಕಾಡುಗಳಲ್ಲಿಯೂ ಸಾಕು ನಾಯಿಗಳನ್ನು ಬಿಟ್ಟಿದ್ದಾರೆ. ಹೀಗೆ ಬರುವ ಹೊಸ ನಾಯಿಗಳನ್ನು ನೋಡಿದರೆ ಅವುಗಳು ಸಾಕು ಮತ್ತು ಜಾತಿಯ ಮರಿಗಳು ಎನ್ನುವುದು ಗೊತ್ತಾಗುತ್ತದೆ. ಹೀಗೆ ನಮಗೆ ನಾಲ್ಕೈದು ನಾಯಿಗಳು ಕಂಡಿವೆ’ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿ ಮಾಹಿತಿ ನೀಡುವರು.
ಗಿರಿಧಾಮದ ಹಾದಿಯಲ್ಲಿಯೂ ಇದೇ ಕಥೆ: ಗಿರಿಧಾಮದ ಪ್ರವೇಶ ದ್ವಾರದ ಸಮೀಪದ ವಾಹನ ನಿಲುಗಡೆ ಸ್ಥಳದಲ್ಲಿ ಆಗಾಗ್ಗೆ ಇಂತಹ ಬೆಳವಣಿಗೆಗಳು ನಡೆಯುತ್ತಿವೆ. ಇದರ ಜೊತೆಗೆ ಗಿರಿಧಾಮಕ್ಕೆ ಬರುವ ಹಾದಿಯಲ್ಲಿಯೂ ಸಾಕು ನಾಯಿ ಬಿಟ್ಟು ಪರಾರಿ ಆಗುವ ಪ್ರಸಂಗಗಳು ನಡೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.