ADVERTISEMENT

ಹೆಣ್ಣುಮಕ್ಕಳ ಉದ್ಧಾರಕ್ಕೆ ಶ್ರಮಿಸಿದ ಫುಲೆ

ಪೇರೇಸಂದ್ರದ ಶಾಂತಾ ವಿದ್ಯಾ ನಿಕೇತನದಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 13:16 IST
Last Updated 3 ಜನವರಿ 2020, 13:16 IST
ಪೇರೇಸಂದ್ರದ ಶಾಂತಾ ವಿದ್ಯಾ ನಿಕೇತನದಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಆಚರಿಸಲಾಯಿತು.
ಪೇರೇಸಂದ್ರದ ಶಾಂತಾ ವಿದ್ಯಾ ನಿಕೇತನದಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಆಚರಿಸಲಾಯಿತು.   

ಚಿಕ್ಕಬಳ್ಳಾಪುರ: ‘ದೇಶದಲ್ಲಿ ಅಸ್ಪೃಶ್ಯತೆ ಆಚರಣೆ ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಸಾಮಾಜಿಕ ವಿರೋಧಗಳು ದಟ್ಟವಾಗಿದ್ದ ಕಾಲದಲ್ಲಿಯೇ ಜಾತಿವಾದಿಗಳನ್ನು ವಿರೋಧಿಸಿ ದೀನದಲಿತರು ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹೆಗ್ಗಳಿಕೆ ಸಾವಿತ್ರಿಬಾಯಿ ಫುಲೆ ದಂಪತಿಗೆ ಸಲ್ಲಬೇಕು’ ಪೇರೇಸಂದ್ರದ ಶಾಂತಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ ಹೇಳಿದರು.

ತಾಲ್ಲೂಕಿನ ಪೇರೇಸಂದ್ರದ ಶಾಂತಾ ವಿದ್ಯಾ ನಿಕೇತನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘19ನೇ ಶತಮಾನದ ಮಧ್ಯ ಭಾಗದಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದ ಸಾವಿತ್ರಿಬಾಯಿ ಅವರು ಆಧುನಿಕ ಭಾರತದ ಮೊದಲ ಶಿಕ್ಷಕಿಯಾಗಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು. ಅಂದಿನ ಸಮಾಜದಲ್ಲಿದ್ದ ಜಾತೀಯತೆ, ಲಿಂಗ ತಾರತಮ್ಯಗಳ ಸಂದರ್ಭದಲ್ಲಿ ಪುಲೆ ದಂಪತಿಗಳು ದೀನದಲಿತ ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ತೆರೆದು ಶಿಕ್ಷಣ ನೀಡುವ ಮೂಲಕ ಭಾರತದ ಚರಿತ್ರೆಯಲ್ಲಿ ಮಹತ್ವದ ಬದಲಾವಣೆ ತಂದರು’ ಎಂದು ತಿಳಿಸಿದರು.

ADVERTISEMENT

‘ಅನಕ್ಷರಸ್ಥೆ ಸಾವಿತ್ರಿ ಬಾಯಿ ಅವರಿಗೆ ಒಂಬತ್ತನೆಯ ವಯಸ್ಸಿನಲ್ಲಿಯೇ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಜ್ಯೋತಿಬಾ ಅವರು ತನ್ನ ಮನೆಯನ್ನೇ ಶಾಲೆಯನ್ನಾಗಿ ಮಾಡಿ ಮೊದಲು ಪತ್ನಿಗೆ ವಿದ್ಯೆ ನೀಡಿ ಶಿಕ್ಷಕರ ತರಬೇತಿ ಕೊಡಿಸಿ ದೇಶದ ಮೊಟ್ಟಮೊದಲ ಶಿಕ್ಷಕಿಯಾಗಿ ರೂಪಿಸಿದರು. ಅಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಬಾಲ್ಯವಿವಾಹ, ಲಿಂಗತಾರತಮ್ಯ, ಬಾಲವಿಧವೆಯರು, ಕೇಶಮುಂಡನ ದಂತಹ ಶೋಷಣೆಗಳಿಂದ ಹೆಣ್ಣುಮಕ್ಕಳನ್ನು ರಕ್ಷಿಸಿ ಬೆಳೆಸುವ ಕೆಲಸ ಮಾಡಿದರು’ ಎಂದರು.

‘ಹದಿಹರೆಯದ ಅವಿವಾಹಿತ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗಿ ತಾಯಂದಿರಾಗಿ ಸಮಾಜಕ್ಕೆ ಹೆದರಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದ ಸಂದರ್ಭದಲ್ಲಿ ಸಾವಿತ್ರಿಬಾಯಿ ಇಂತಹ ಅನೇಕ ಜನ ಶೋಷಿತ ಹೆಣ್ಣುಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಶಿಕ್ಷಣ ಮತ್ತು ವೃತ್ತಿ ಕೌಶಲ ಕಲಿಸಿ ಅವರಿಗಾಗಿಯೇ ರಹಸ್ಯ ಪ್ರಸೂತಿ ಕೇಂದ್ರಗಳನ್ನು ತೆರೆದರು. ವಿಧವಾ ವಿವಾಹ, ಹೆಣ್ಣುಮಕ್ಕಳ ಸಂತಾನೋತ್ಪತ್ತಿ ಆರೋಗ್ಯ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದುಡಿಯುತ್ತಾ 1848ರಲ್ಲಿಯೇ ಪ್ರಥಮವಾಗಿ ಸ್ವಂತ ಹೆಣ್ಣುಮಕ್ಕಳ ಶಾಲೆಯನ್ನು ಸ್ಥಾಪಿಸಿದರು’ ಎಂದು ಹೇಳಿದರು.

‘ಸಾವಿತ್ರಿಬಾಯಿ ತಾವು ಶಿಕ್ಷಕಿಯಾಗಿ ಹೆಣ್ಣುಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಮೇಲ್ವರ್ಗದ ಜನ ಅವಮಾನಿಸಿದರೂ ಹೆದರದೇ ಸಮಾಜಸೇವೆಯಲ್ಲಿ ಮುಂದುವರೆಸಿದರು. ಫುಲೆ ದಂಪತಿ 18 ಶಾಲೆಗಳನ್ನು ಸ್ಥಾಪಿಸಿ ತಮ್ಮ ಹೋರಾಟವನ್ನು ಮುಂದುವರೆಸಿದರು. ನೊಂದ ಮಹಿಳೆಯರು ಮತ್ತು ಹಿಂದುಳಿದವರನ್ನು ಸಂಘಟಿಸಿ ಸಮಾಜ ಪರಿವರ್ತನೆಗಾಗಿ ಫುಲೆ ದಂಪತಿ 1873ರಲ್ಲಿ ಸತ್ಯಶೋಧಕ ಸಮಾಜ ಸ್ಥಾಪಿಸಿದರು. ನಂತರ ಕೊಲ್ಲಾಪುರದ ಶಾಹು ಮಹಾರಾಜರು ಈ ಸಂಘದ ಚಟುವಟಿಕೆಗಳಿಗೆ ನೈತಿಕ ಬೆಂಬಲ ನೀಡಿದರು’ ಎಂದು ತಿಳಿಸಿದರು. ಪ್ರೊ.ಹನುಮಂತ ರೆಡ್ಡಿ, ದೀಪಕ್ ಮ್ಯಾಥ್ಯೂ, ಅಜೀಶ್, ಹರೀಶ್, ಶಶಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.