ADVERTISEMENT

ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಿದ ಫುಲೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:28 IST
Last Updated 4 ಜನವರಿ 2021, 3:28 IST
ಶಿಡ್ಲಘಟ್ಟ ತಾಲ್ಲೂಕಿನ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನ ಆಚರಿಸಲಾಯಿತು
ಶಿಡ್ಲಘಟ್ಟ ತಾಲ್ಲೂಕಿನ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮದಿನ ಆಚರಿಸಲಾಯಿತು   

ಶಿಡ್ಲಘಟ್ಟ: ಅತೀವ ಅವಮಾನ, ನೋವುಗಳನ್ನು ಸಹಿಸುತ್ತಲೇ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಿದ ದಿಟ್ಟ ಮಹಿಳೆ, ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಮುಖ್ಯಶಿಕ್ಷಕ ಎನ್.ಪಂಚಾಮೂರ್ತಿ ತಿಳಿಸಿದರು.

ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ಸ್ವಾಭಿಮಾನದ ಸಂಕೇತದಂತಿದ್ದ ಸಾವಿತ್ರಿಬಾಯಿ ಅವರು ಶೋಷಣೆಗೊಳಗಾಗಿದ್ದ ಕೆಳ ಸಮುದಾಯದವರಿಗೆ ಶಿಕ್ಷಣ ನೀಡಿದರು. ಆ ಮೂಲಕ ಶೈಕ್ಷಣಿಕ ಕ್ರಾಂತಿಕೆ ಕಾರಣರಾದರು. ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಸಾವಿತ್ರಿ ಅವರು 1848ರಲ್ಲಿ ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ ಕಾರಣ. ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ಹಾಗೂ ಅವಕಾಶಗಳು ಲಭಿಸುತ್ತವೆ. ಎಲ್ಲರೂ ವಿಶೇಷವಾಗಿ ಹೆಣ್ಣುಮಕ್ಕಳು ಕೂಡ ಶಿಕ್ಷಣ ಪಡೆಯಬೇಕು. ನಾವು ಇತಿಹಾಸವನ್ನು ಅರಿತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ, ಮತ್ತು ಮಹಾತ್ಮ ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ ಹೋರಾಟದ ಕುರಿತು ತಿಳಿಯುವುದು ಮುಖ್ಯ ಎಂದು ಹೇಳಿದರು.

ADVERTISEMENT

ಶಿಕ್ಷಕಿ ಪ್ರತಿಮಾದೇವಿ ಮಾತನಾಡಿ, ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಅವರು ಮಹಿಳಾ ಸಮಾಜಕ್ಕೆ ಸ್ಫೂರ್ತಿ. ಸಮಾಜದಲ್ಲಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಫುಲೆ ದಂಪತಿ ಶ್ರಮಿಸಿದ್ದರು. ಹಲವು ಅಡೆತಡೆಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯರಾದರು. ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ್ದು ಸಾವಿತ್ರಿಬಾಯಿ ಅವರು ಹೆಣ್ಣುಮಕ್ಕಳ ಶಿಕ್ಷಣದ ಹಿಂದಿನ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಶಿಕ್ಷಕರಾದ ಎನ್.ವೆಂಕಟಮೂರ್ತಿ, ವೆಂಕಟೇಶ್, ಮಂಜುನಾಥ್, ಲಿಂಗರಾಜು, ಮಧುಚಂದ್ರ, ಸರೋಜಮ್ಮ, ರೇಣುಕಾ, ಸುನಿತಾ, ಮಂಜುಳಾ, ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.