ADVERTISEMENT

ಅಗತ್ಯ ನೀರು ಪೂರೈಕೆಗೆ ಪ್ರತಿ ಮನೆಗೆ ನಲ್ಲಿ

ಶಿಡ್ಲಘಟ್ಟ ನಗರಸಭೆಯಲ್ಲಿ ವ್ಯಾಪ್ತಿಯಲ್ಲಿ ಭರದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 12:34 IST
Last Updated 18 ಮಾರ್ಚ್ 2020, 12:34 IST
ಹನ್ನೊಂದನೇ ವಾರ್ಡಿನಲ್ಲಿ ಮುಖ್ಯ ಪೈಪ್ ಲೈನ್‌ನಿಂದ ಪ್ರತಿಮನೆಗೂ ನೀರಿನ ನಲ್ಲಿ ಸಂಪರ್ಕ ಕೊಡುತ್ತಿರುವುದು
ಹನ್ನೊಂದನೇ ವಾರ್ಡಿನಲ್ಲಿ ಮುಖ್ಯ ಪೈಪ್ ಲೈನ್‌ನಿಂದ ಪ್ರತಿಮನೆಗೂ ನೀರಿನ ನಲ್ಲಿ ಸಂಪರ್ಕ ಕೊಡುತ್ತಿರುವುದು   

ಶಿಡ್ಲಘಟ್ಟ: ಬೇಸಿಗೆಯ ಬಿಸಿಯೊಂದಿಗೆ ನಗರದಲ್ಲಿ ಈಗಾಗಲೇ ನೀರಿಗಾಗಿ ತತ್ವಾರ ಉಂಟಾಗಿದೆ. ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ಬರುವ ನೀರನ್ನು ಜನರು ಅಮೂಲ್ಯ ವಸ್ತುವಿನಂತೆ ಕಾಪಾಡಿಕೊಂಡು ಉಪಯೋಗಿಸಬೇಕಾದ ಪರಿಸ್ಥಿತಿಯಿದೆ.

ನಗರಸಭೆಯಿಂದ ಕುಡಿಯುವ ಸಿಹಿನೀರು ಮತ್ತು ದಿನಬಳಕೆ ಎಂಬ ಎರಡು ವಿಧದ ನಲ್ಲಿಗಳನ್ನು ಅಳವಡಿಸಿದ್ದಾರೆ. ಸಾಮಾನ್ಯವಾಗಿ ಸಿಹಿನೀರಿನ ಸಂಪರ್ಕ ಮನೆಗಳ ಒಳಗೆ ನೀಡಿದೆ. ಅದಕ್ಕೆ ಇಂತಿಷ್ಟು ಎಂದು ಹಣವನ್ನು ನಗರಸಭೆಗೆ ಪಾವತಿಸಬೇಕಿದೆ. ಆದರೆ, ದಿನಬಳಕೆ ನೀರು ಬರುವ ನಲ್ಲಿಗಳನ್ನು ಕೆಲವಾರು ಮನೆಗಳಿಗೆ ಒಂದರಂತೆ ಆಯಾಯ ಬೀದಿಯ ಬದಿಯಲ್ಲಿ ಅಳವಡಿಸಿರಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ. ಇದು ನಗರಸಭೆಯ ಉಚಿತ ಸೇವೆಯಾಗಿದೆ.

ನಗರದ ಹನ್ನೊಂದನೇ ವಾರ್ಡಿನಲ್ಲಿ ನನೆಗುದಿಗೆ ಬಿದ್ದಿದ್ದ ನೀರಿನ ಸಂಪರ್ಕದ ನಲ್ಲಿಗಳ ಅಳವಡಿಸುವಿಕೆಯ ಕಾರ್ಯವನ್ನು ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್ ನಡೆಸಿದ್ದಾರೆ. ಈಗ ವಾರ್ಡಿನ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕವನ್ನು ಕಲ್ಪಿಸಲಾಗಿದೆ. ಪ್ರತಿ ಬೀದಿಯಲ್ಲೂ ದಿನಬಳಕೆ ನೀರಿನ ನಲ್ಲಿಗಳನ್ನು ಅಳವಡಿಸಲಾಗಿದೆ. ಸುಮಾರು 15 ವರ್ಷಗಳಿಂದ ನೀರಿನ ನಲ್ಲಿಯ ಸಂಪರ್ಕವಿಲ್ಲದ ಮನೆಗಳಿಗೆ ಈಗ ಸಂಪರ್ಕ ಸಿಕ್ಕಿದೆ.

ADVERTISEMENT

ಕುಂಬಾರಪೇಟೆಯ ಬಳಿ ಕೆಲವು ಮನೆಗಳಿಗೆ ಉಪ್ಪು ನೀರು ನಲ್ಲಿ ಸಂಪರ್ಕವೇ ಇರಲಿಲ್ಲ. ಅವುಗಳನ್ನೂ ಸಹ ಹೊಸದಾಗಿ ಪೈಪ್ ಲೈನ್ ಮಾಡಿಸಿದ್ದೇವೆ. ಇದೀಗ 11 ನೇ ವಾರ್ಡ್ ನ 200 ಮನೆಗಳಿಗೂ ನೀರಿನ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದು ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್ ತಿಳಿಸಿದರು.

ಬೇಸಿಗೆ ಪರಿಸ್ಥಿತಿಯಲ್ಲಿ ಸಿಹಿನೀರು 10-15 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಉಪ್ಪುನೀರು ಕೆಲವು ಮನೆಗಳಿಗೆ 8 ದಿನಗಳಿಗೊಮ್ಮೆ ಬಂದರೆ, ಕೆಲವು ಮನೆಗಳಿಗೆ 15 ದಿನಗಳಿಗೆ ಬರುತ್ತಿದೆ. ಕಾರಣವೇನೆಂದರೆ ನಮ್ಮ ವಾರ್ಡ್ ನ ಕೊಳವೆ ಬಾವಿಯ ನೀರನ್ನು ಮೂರು ವಾರ್ಡ್ ಗಳಿಗೆ ಹಂಚಲಾಗುತ್ತದೆ. ಕೊಳವೆ ಬಾವಿಯೊಂದನ್ನು ಕೊರೆಸಲು ಸ್ಥಳವನ್ನು ಗುರುತಿಸಿದ್ದು, ಶಾಸಕರಿಗೆ ಮನವಿಯನ್ನು ಮಾಡಿದ್ದೇನೆ. ಅಕಸ್ಮಾತ್ ಬೇಸಿಗೆಯ ತೀವ್ರತೆ ಜಾಸ್ತಿಯಾಗಿ, ನೀರಿನ ಅಭಾವ ಹೆಚ್ಚಾದರೆ ಟ್ಯಾಂಕರ್ ಮೂಲಕ ಜನರಿಗೆ ನೀರು ತಂದು ಕೊಡಲು ಚಿಂತನೆ ನಡೆಸಿದ್ದೇವೆ ಎಂದು ಅವರು ವಿವರಿಸಿದರು.

*

ಹಲವಾರು ವರ್ಷಗಳಿಂದ ನಲ್ಲಿ ಸಂಪರ್ಕವೇ ಇಲ್ಲದಿದ್ದ ಸಾಕಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಬಂದಿದೆ. ಸ್ವಚ್ಛತೆ ಕಾರ್ಯ ನಡೆಯುತ್ತಿದೆ.

- ಶ್ರೀನಿವಾಸ್, ದೇಶದಪೇಟೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.