ಚಿಕ್ಕಬಳ್ಳಾಪುರ: ‘ಅರಣ್ಯ ನಾಶ ಇದೇ ರೀತಿಯಲ್ಲಿ ನಡೆದಲ್ಲಿ ಮುಂದೆ ಅತ್ಯಂತ ಸಂಕಷ್ಟದ ದಿನಗಳು ಎದುರಾಗಲಿವೆ. ಆದ್ದರಿಂದ ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ’ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಲ್ ನಾರಾಯಣಸ್ವಾಮಿ ಹೇಳಿದರು.
ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರಿಸರ ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರಲ್ಲೂ ಬರಬೇಕು. ಆಗ ಮಾತ್ರ ಪರಿಸರ ಮಾಲಿನ್ಯ, ಅದರಿಂದಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸ್ವಚ್ಛತೆ ಅರಿವು ಜನಸಾಮಾನ್ಯರಲ್ಲಿ ಇನ್ನಷ್ಟು ಮೂಡಬೇಕಿದೆ. ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಯುವಪೀಳಿಗೆ ಮುಂದಾಗಬೇಕು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ದೇಶ ಮತ್ತು ಸಮಾಜದ ಅಭಿವೃದ್ಧಿಯ ಸೇವಾ ಮಾನೋಭಾವ ಹೊಂದಿರಬೇಕು. ಗುರು ಹಿರಿಯರ ಬಗ್ಗೆ ಗೌರವ ಹೊಂದಿರಬೇಕು. ಹಾಗಾದಾಗ ಮಾತ್ರ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ’ ಎಂದರು.
ಗುಂಪು ಮರದ ಆನಂದ್ ಮಾತನಾಡಿ, ‘ಪರಿಸರ ಸಂರಕ್ಷಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಹೊಣೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳಸಿ ಪ್ರತಿಯೊಬ್ಬರು ಪರಿಸರ ಸಂರಕ್ಷ ಣೆಗೆ ಶ್ರಮಿಸಬೇಕು. ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಭವಿಷ್ಯದಲ್ಲಿ ಎದುರಾಗುವ ಅನೇಕ ಅಪಾಯಗಳನ್ನು ತಪ್ಪಿಸಬಹುದು’ ಎಂದು ಹೇಳಿದರು.
‘ಪರಂಪರಾಗತವಾಗಿ ಬಂದ ಅರಣ್ಯ ಸಂಪತ್ತನ್ನು ನಾವು ಉಳಿಸಿ ಮುಂದಿನ ತಲೆಮಾರಿಗೆ ಉಡುಗೊರೆಯಾಗಿ ಕೊಡಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ 100 ಗಿಡ ನೆಟ್ಟು ಬೆಳೆಸಬೇಕು. ನೆಟ್ಟ ಗಿಡಗಳು ಬೆಳೆದು ಫಲ ನೀಡುವಾಗ ದೊರೆಯುವ ಸಂತೋಷ ಬೇರೆಲ್ಲೂ ಸಿಗಲಾರದು’ ಎಂದು ತಿಳಿಸಿದರು. ಕಾಲೇಜಿನ ದೈಹಿಕ ವಿಭಾಗದ ನಿರ್ದೇಶಕಿ ಎಸ್.ಎಸ್.ಗಿರಿಜಾ, ಪ್ರಾಧ್ಯಾಪಕಿ ಸುಜಾತಾ, ಪರಿಸರವಾದಿ ಶಿವಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.