ADVERTISEMENT

ಚಿಕ್ಕಬಳ್ಳಾಪುರ | ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಸಚಿವ ಸುಧಾಕರ್ ವಾಗ್ದಾಳಿ

ಆಯಕಟ್ಟಿನ ಜಾಗದಲ್ಲಿ ಏಜೆಂಟರನ್ನು ಬಿಟ್ಟವರು ಅವರೇ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 2:55 IST
Last Updated 16 ಆಗಸ್ಟ್ 2025, 2:55 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಚಿಕ್ಕಬಳ್ಳಾಪುರ: ‘ಅಧಿಕಾರಿಗಳನ್ನು ಗುಲಾಮರನ್ನಾಗಿ ಅವರು ಜಿಲ್ಲಾ ಮಂತ್ರಿಯಾಗಿದ್ದ ವೇಳೆಯಲ್ಲಿ ಮಾಡಿಕೊಂಡಿರಬಹುದು. ಆದರೆ ನಾವು ಹಾಗೆಲ್ಲ ಮಾಡಿಕೊಂಡಿಲ್ಲ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಜೆಂಟರನ್ನು ಬಿಟ್ಟವರು ಅವರೇ’ ಎಂದು ಸಂಸದ ಸುಧಾಕರ್ ಅವರ ಆರೋಪಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಅವರ ಅನುಮತಿ ಇಲ್ಲದೆ ಯಾವುದೇ ಕೆಲಸ ಆಗುತ್ತಿರಲಿಲ್ಲ, ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಲು ನಮ್ಮ ಅವಧಿಯಲ್ಲಿ ಬಿಟ್ಟಿದ್ದೇವೆ, ಯಾರನ್ನೂ ಗುಲಾಮರನ್ನಾಗಿ ಮಾಡಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಾವುದೇ ಸರ್ಕಾರ ಇದ್ದರೂ ಕಾನೂನು ಚೌಕಟ್ಟಿನ ನಿಯಮಗಳಡಿ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಹಾಗೆ ಅವರು ಭಾವಿಸಿದರೆ ಅದು ಅಧಿಕಾರಿಗಳಿಗೆ ಅವರು ಮಾಡಿದ ಅವಮಾನ. ನಮ್ಮ ಶೈಲಿಯೇ ಬೇರೆ, ಶಾಸಕರು ಮತ್ತು ಸಂಸದರ ಶೈಲಿಗಳೇ ಬೇರೆ. ಅವರ ಶೈಲಿ ನಮಗೆ ಬರಲ್ಲ, ಯಾಕೆಂದರೆ 22 ವರ್ಷದ ರಾಜಕೀಯ ಅನುಭವ ನಮಗಿದೆ’ ಎಂದರು.

ADVERTISEMENT

‘ಬಾಬು ಅವರು ನಮಗೆ ತೊಂದರೆ ಆಗಿದೆ ಎಂದು ದೂರು ಕೊಟ್ಟಿಲ್ಲ. ಅಂದು ಬೆಳಗ್ಗೆ ಆದ ಘಟನೆಯ ಬಗ್ಗೆ ಮಾಹಿತಿಯನ್ನು ಜಿಲ್ಲಾಡಳಿತ ನೀಡಿತು. ನಮಗೆ ಆಘಾತ ಆಯಿತು. ಡೆತ್‌ನೋಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಆತನ ಪತ್ನಿ ಬುದ್ಧಿವಾದ ಹೇಳಿದ ಬಗ್ಗೆಯೂ ಮಾಹಿತಿ ಇದೆ. ಇವರು ಮತ್ತು ಇವರ ಅನುಯಾಯಿಗಳ ನಡುವೆ ಏನು ನಡೆದಿದೆ ಎಂದು ಬಾಬು ಮತ್ತು ಅವರಿಗೆ ಮಾತ್ರ ಗೊತ್ತು’ ಎಂದು ನುಡಿದರು.

‘ಬಾಬು ಸಾಯಬೇಕು ಎಂದು ತೀರ್ಮಾನ ಮಾಡಿದವರು ಇವರ ಹೆಸರು ಯಾಕೆ ಬರೆದಿದ್ದಾರೆ ಅನ್ನೋದು ಅವರೊಬ್ಬರಿಗೇ ಗೊತ್ತಿದೆ. ದೂರು ಕೊಟ್ಟಂತೆ ಎಫ್‌ಐಆರ್ ಆಗುತ್ತದೆ. ನಾನು ದೂರು ಕೊಟ್ಟಿಲ್ಲ. ಬದಲಿಗೆ ಬಾಬು ಅವರ ಪತ್ನಿ ನೀಡಿದ ದೂರಿನಂತೆ ಎಫ್‌ಐಆರ್ ಆಗುತ್ತದೆ. ಸಚಿವರೋ, ಶಾಸಕರೋ ಹೇಳಿದಂತಲ್ಲ’ ಎಂದರು.

‘ಅಧಿಕಾರ ಶಾಶ್ವತವಲ್ಲ, ಜನರ ಆಶೀರ್ವಾದ ಇರುವವರೆಗೂ ಅಧಿಕಾರದಲ್ಲಿರುತ್ತೇವೆ. ನಾನು 10 ವರ್ಷ ಅಧಿಕಾರದಿಂದ ದೂರ ಇದ್ದೆ, ಆದರೆ ಅವರು 10 ತಿಂಗಳಿಗೆ ಅಧಿಕಾರ ಇಲ್ಲದೆ ಒದ್ದಾಡಿದರು. ನನ್ನ ಅಧಿಕಾರದ ಜವಾಬ್ದಾರಿಯನ್ನು ಜನರ ಒಳಿತಿಗಾಗಿ ಉಪಯೋಗಿಸುತ್ತೇನೆ’ ಎಂದರು.

‘ಮುಖ್ಯಮಂತ್ರಿಗೆ ಕಾಂಗ್ರೆಸ್ ಹೈಕಮಾಂಡ್ ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡಿ ಎಂದರೆ ಅವರು ಕೈ ಬಿಡಲಿದ್ದಾರೆ. ಅದನ್ನು ಪ್ರಶ್ನೆ ಮಾಡುವ ವಿಚಾರ ಸಾರ್ವಜನಿಕವಾಗಿ ಮಾಡುವುದಿಲ್ಲ. ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಪಕ್ಷದ ಸಿದ್ಧಾಂತ, ತೀರ್ಮಾನಕ್ಕೆ ತಲೆಬಾಗಬೇಕು. ರಾಜಣ್ಣ ಅವರು, ರಾಹುಲ್ ಗಾಂಧಿ ಅವರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಪಕ್ಷದ ಶಿಸ್ತು, ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.