ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ಅವರ ವಿರುದ್ಧ ಹೋರಾಟ ನಡೆಸಿ ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿದ ಕಾಂಗ್ರೆಸ್ ನಾಯಕರು, ಈಗ ಸ್ವಪಕ್ಷೀಯ ಶಾಸಕರ ವಿರುದ್ಧ ಹೋರಾಟಕ್ಕಾಗಿ ಕೆಪಿಸಿಸಿ ಮತ್ತು ಕಾಂಗ್ರೆಸ್ ರಾಜ್ಯ ನಾಯಕರ ಮನೆಗಳ ಮೆಟ್ಟಿಲು ಹತ್ತುತ್ತಿದ್ದಾರೆ.
ಅಧಿಕಾರ ಇಲ್ಲದಿದ್ದಾಗಲೂ ಒಂದು ಬಗೆಯ, ಈಗ ಸ್ವಪಕ್ಷದ ಶಾಸಕರೇ ಅಧಿಕಾರದಲ್ಲಿರುವಾಗ ಮತ್ತೊಂದು ಬಗೆಯ ಹೋರಾಟ ನಡೆಸಿದ್ದಾರೆ. ಇದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ‘ಕಾಂಗ್ರೆಸ್’ ರಾಜಕಾರಣದ ನಾನಾ ಮಜಲುಗಳನ್ನು ಬಿಚ್ಚಿಡುತ್ತಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ‘ಕೈ’ ಒಡಕು ಜಿಲ್ಲೆಯ ರಾಜಕೀಯದಲ್ಲಿ ಸದ್ಯ ಚರ್ಚೆಯ ಪ್ರಮುಖ ವಿಷಯ.
ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದ ಆಕ್ರೋಶಗೊಂಡಿದ್ದ ಮುಖಂಡರು ಸುಧಾಕರ್ ವಿರುದ್ಧ ಹೋರಾಟ ತೀವ್ರಗೊಳಿಸಿದರು. ಈ ಪ್ರಕರಣಗಳು ಸುಧಾಕರ್ ಅವರಿಗೆ ವಿರೋಧಿ ಅಲೆಯನ್ನು ಸಹ ಹೆಚ್ಚಿಸಿತು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, 2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಸುಧಾಕರ್ ವಿರುದ್ಧ ಸ್ಪರ್ಧಿಸಿದ್ದ ನಂದಿ ಆಂಜನಪ್ಪ ಹಾಗೂ ಅವರ ಬೆಂಬಲಿಗರ ಮೇಲೆ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವೇಳೆ ಪ್ರಕರಣ ದಾಖಲಾಯಿತು.
ಬಾಬು ಜಗಜೀವನ ರಾಮ್ ಭವನದ ವಿಚಾರವಾಗಿ ಹೋರಾಟ ನಡೆಸಿದ ಮಾಜಿ ಶಾಸಕ ಹಾಗೂ ದಲಿತ ನಾಯಕ ಎಸ್.ಎಂ.ಮುನಿಯಪ್ಪ ಅವರ ಮೇಲೂ ದೂರು ದಾಖಲಾಯಿತು. ಆ ನಂತರ ಕಾವು ಜೋರಾದಂತೆ ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್ ನಾರಾಯಣಸ್ವಾಮಿ’ ವಿರುದ್ಧವೂ ಪ್ರಕರಣಗಳು ದಾಖಲಾದವು. ಕೋಚಿಮುಲ್ ಮಾಜಿ ನಿರ್ದೇಶಕ ವೆಂಕಟೇಶ್, ಮುಖಂಡ ನುಗುತನಹಳ್ಳಿ ರವಿ ಅವರು ಸಹ ಪೊಲೀಸ್ ಠಾಣೆ ಹತ್ತಲು ಕಾರಣ ಸುಧಾಕರ್ ಎನ್ನುವುದು ಕ್ಷೇತ್ರದ ಜನರಾಡುವ ಮಾತು.
2022ರ ಜೂನ್‌ನಲ್ಲಿ ಜರಬಂಡಹಳ್ಳಿ ಗ್ರಾಮ ಪಂಚಾಯಿತಿಯ 27 ಪಲಾನುಭವಿಗಳಿಗೆ ಬಿ.ಆರ್.ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಯಡಿ ಮನೆ ಮಂಜೂರಾತಿ ಪತ್ರಗಳನ್ನು (ಫೋಟೊ ಪ್ರೇಮ್) ವಿತರಣೆ ವಿಚಾರವಾಗಿ ನಡೆದ ಜಟಾಪಟಿ ವಿಚಾರವಾಗಿ ಮಂಚೇನಹಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎನ್.ಪ್ರಕಾಶ್ ಮೇಲೂ ಪ್ರಕರಣ ದಾಖಲಾಯಿತು. ಅವರನ್ನು ಬಂಧಿಸಲಾಯಿತು.
ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಹಾಗೂ ಅವರನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಚೇನಹಳ್ಳಿ ಠಾಣೆ ಎದುರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದರು.
‘ಡಾ.ಕೆ.ಸುಧಾಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಮುಖಂಡರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಧಿಕ್ಕಾರದ ಘೋಷಣೆ ಕೂಗಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ತಾಯಿ, ‘ನಮ್ಮ ಹುಟ್ಟೆ ಉರಿಸ್ತೀರಾ. ಎಕ್ಕುಟ್ಟಿ ಹೋಗತ್ತೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ‘ಅಧಿಕಾರ ಎಷ್ಟು ದಿನ ಇರುತ್ತದೆ ಎಂದು ನೋಡುತ್ತೇವೆ’ ಎಂದು ಸುಧಾಕರ್ ಮತ್ತು ಬಿಜೆಪಿ ವಿರುದ್ಧ ಬಂಧನದ ವೇಳೆ ಪ್ರಕಾಶ್ ತೀವ್ರ ವಾಗ್ದಾಳಿ ನಡೆಸಿದ್ದರು.
ಹೀಗೆ ಸುಧಾಕರ್ ಅವರನ್ನು ಮಣಿಸಬೇಕು ಎಂದು ಹೋರಾಟ ನಡೆಸಿದ ಮುಖಂಡರು ಯಶಸ್ವಿಯೂ ಆದರು. ಆದರೆ ಈಗ ತಮ್ಮದೇ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ಧೋರಣೆ ವಿರುದ್ಧವೇ ಈ ಮುಖಂಡರು ಈಗ ಹೋರಾಟ ನಡೆಸುತ್ತಿದ್ದಾರೆ. ಶಾಸಕರು ಮತ್ತು ಅವರ ಬೆಂಬಲಿಗರಿಂದ ಟೀಕೆಗಳನ್ನೂ ಎದುರಿಸುತ್ತಿದ್ದಾರೆ.
ಶಾಸಕರ ಧೋರಣೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಈ ಹಿರಿಯ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರಿಗೆ ಈಗಾಗಲೇ ದೂರು ನೀಡಿದ್ದಾರೆ.
ಕೆಪಿಸಿಸಿಯಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ವೀಕ್ಷಕರನ್ನು ನೇಮಿಸಿ, ಹಿರಿಯ ಮುಖಂಡರ ಸಮಿತಿ ರಚಿಸಬೇಕು. ಹಳೇ ನೇಮಕಾತಿ ರದ್ದುಪಡಿಸಬೇಕು. ಸರ್ಕಾರಿ ನಾಮನಿರ್ದೇಶನ ಮತ್ತು ಬ್ಲಾಕ್ ಕಾಂಗ್ರೆಸ್ ಹುದ್ದೆಗಳಿಗೆ ಹೊಸದಾಗಿ ನೇಮಕ ಮಾಡಿ ಪಕ್ಷ ಉಳಿಸಿ ಎಂದು ದೂರಿನಲ್ಲಿ ಕೋರಿದ್ದಾರೆ.
ಒಕ್ಕಲಿಗ ಮುಖಂಡರಿಗೇ ಪೆಟ್ಟು
ಡಾ.ಕೆ.ಸುಧಾಕರ್ ವಿರುದ್ಧ ಹೋರಾಟ ನಡೆಸಿ ಠಾಣೆಗಳ ಮೆಟ್ಟಿಲು ಹತ್ತಿದವರಲ್ಲಿ ಕಾಂಗ್ರೆಸ್ ಜೆಡಿಎಸ್‌ನ ಒಕ್ಕಲಿಗ ಸಮುದಾಯದ ಮುಖಂಡರೇ ಹೆಚ್ಚಿದ್ದರು. ಇದು ಸಹ ಸುಧಾಕರ್ ಅವರಿಗೆ ಕ್ಷೇತ್ರದಲ್ಲಿ ವಿರೋಧಿ ಅಲೆ ಬೆಳೆಸುವಲ್ಲಿ ಪ್ರಮುಖವಾದ ಅಂಶ. ರಕ್ಷಾ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಆಗಬೇಕು ಎಂದು ಒತ್ತಾಯಿಸಿದವರಲ್ಲಿ ಒಕ್ಕಲಿಗ ಮುಖಂಡರೇ ಹೆಚ್ಚಿದ್ದರು. ಜೆಡಿಎಸ್ ಸೋಲಿನ ಸುಳಿವು ಅರಿತು ಆ ಪಕ್ಷದ ಸಾಂಪ್ರದಾಯಿಕ ಮತದಾರರು ಎನಿಸಿದ್ದ ಬಹುಸಂಖ್ಯೆಯ ಒಕ್ಕಲಿಗರು ‘ಕೈ’ ಅಭ್ಯರ್ಥಿಗೆ ಮತ ನೀಡಿದರು. ಈಗ ಪ್ರದೀಪ್ ಈಶ್ವರ್ ವಿರುದ್ಧ ದೂರು ನೀಡಿ ಪತ್ರಕ್ಕೆ ಸಹಿ ಹಾಕಿದ 28 ಮುಖಂಡರಲ್ಲಿ ವಿವಿಧ ಸಮುದಾಯ ಮುಖಂಡರು ಇದ್ದರೂ ಒಕ್ಕಲಿಗ ನಾಯಕರೇ ಹೆಚ್ಚಿದ್ದಾರೆ.
‘ಪಕ್ಷ ಉಳಿಸಬೇಕು ಎನ್ನುವುದೇ ಆಗ್ರಹ’
ಸುಧಾಕರ್ ವಿರುದ್ಧ ಹೋರಾಟ ನಡೆಸಿ ಪಕ್ಷ ಕಟ್ಟಿದ್ದೇವೆ. ಆಗ ಪೊಲೀಸ್ ಠಾಣೆಗಳನ್ನು ಅಲೆದಿದ್ದೇವೆ. ನಮ್ಮ ಕುಟುಂಬಗಳ ನೆಮ್ಮದಿ ಸಹ ಕೆಟ್ಟಿದೆ. ದೀರ್ಘ ಕಾಲದಿಂದಲೂ ಪಕ್ಷಕ್ಕೆ ದುಡಿದ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಮತ್ತು ಮುಖಂಡರು ಇದ್ದಾರೆ. ನಾವು ಇಂದು ನೆನ್ನೆ ಬಂದವರಲ್ಲ. ಆದರೆ ಪಕ್ಷದ ಪದಾಧಿಕಾರಿ ನೇಮಕ ಸೇರಿದಂತೆ ಯಾವ ವಿಚಾರದಲ್ಲಿಯೂ ಮುಖಂಡರನ್ನು ಶಾಸಕರು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕ್ಷೇತ್ರದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಸೋತಿದ್ದೇವೆ. ಜಿ.ಪಂ ತಾ.ಪಂ ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ಪಕ್ಷ ಉಳಿಸಬೇಕು ಎನ್ನುವುದೇ ನಮ್ಮ ಆಗ್ರಹ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.