ADVERTISEMENT

ಚಿಂತಾಮಣಿ | ಪೌರಕಾರ್ಮಿಕರ ವಸತಿಗೃಹ: ವಿದ್ಯುತ್ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 13:45 IST
Last Updated 21 ಆಗಸ್ಟ್ 2024, 13:45 IST
<div class="paragraphs"><p>ಚಿಂತಾಮಣಿಯ ಪೌರಕಾರ್ಮಿಕರ ವಸತಿಗೃಹಗಳು</p></div>

ಚಿಂತಾಮಣಿಯ ಪೌರಕಾರ್ಮಿಕರ ವಸತಿಗೃಹಗಳು

   

ಚಿಂತಾಮಣಿ: ನಗರದ ಆಶ್ರಯ ಬಡಾವಣೆಯಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಿರುವ ವಸತಿಗೃಹಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ನಗರವನ್ನೆಲ್ಲ ಸ್ವಚ್ಛಗೊಳಿಸುವ ಪೌರಕಾರ್ಮಿಕರು ಬೆಳಕಿಲ್ಲದೆ ಕಗ್ಗತ್ತಲಲ್ಲಿ ಕಾಲಕಳೆಯುವಂತಾಗಿದೆ.

ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗಾಗಿ 32 ಮನೆ ನಿರ್ಮಾಣ ಮಾಡಲಾಗಿದೆ. ತಲಾ ₹7.5 ಲಕ್ಷ ವೆಚ್ಚದಲ್ಲಿ ಸುಮಾರು ₹2.4 ಕೋಟಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಕಾಮಗಾರಿ ಪೂರ್ಣವಾಗದಿದ್ದರೂ 2022ನೇ ಮೇ ತಿಂಗಳಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್ ಉದ್ಘಾಟನೆ ನೆರವೇರಿಸಿದ್ದರು.

ADVERTISEMENT

ವಸತಿಗೃಹಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಬೀದಿ ದೀಪ ಮುಂತಾದ ಸೌಲಭ್ಯ ಒದಗಿಸದೆ ಉದ್ಘಾಟನೆ ನೆರವೇರಿಸಿ ಪೌರಕಾರ್ಮಿಕರಿಗೆ ವಿತರಿಸಲಾಗಿತ್ತು. ಪೌರಕಾರ್ಮಿಕರು ಅಂದಿನಿಂದಲೂ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಉಪಯೋಗಿಸುತ್ತಿದ್ದರು.

ಬೆಸ್ಕಾಂ ಅಧಿಕಾರಿಗಳು ಹಲವಾರು ಬಾರಿ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಬೆಸ್ಕಾಂ ಸಿಬ್ಬಂದಿ ಎಲ್ಲ ಮನೆಗಳ ಅಕ್ರಮ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ.

ಪ್ರತಿದಿನ ಬೆಳಗಾದ ಕೂಡಲೇ ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ಜನರ ಆರೋಗ್ಯವನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಠ ಸೌಲಭ್ಯ ಒದಗಿಸದಿರುವುದು ಸರಿಯಲ್ಲ. ಅಗತ್ಯ ಸೌಲಭ್ಯ ಒದಗಿಸದಿರುವುದು ಪೌರಕಾರ್ಮಿಕರಿಗೆ ನೀಡಿರುವ ಕತ್ತಲಿನ ಭಾಗ್ಯವಾಗಿದೆ ಎಂದು ಪೌರಕಾರ್ಮಿಕರೊಬ್ಬರ ಪತ್ನಿ ವೀಣಾ ಅಸಮಧಾನ ವ್ಯಕ್ತಪಡಿಸಿದರು.

ವಿದ್ಯುತ್ ಕಡಿತದ ಕುರಿತು ಮಾಹಿತಿ ಇಲ್ಲ. ಕಡತಗಳ ಪರಿಶೀಲಿಸಿ ಏನು ಸಮಸ್ಯೆ ಆಗಿದೆ ಎಂದು ಖಚಿತಪಡಿಸಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಜಿ.ಎನ್.ಚಲಪತಿ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.