ADVERTISEMENT

15ರಿಂದ 20 ವರ್ಷ ನಾನೇ ಶಾಸಕ: ಪ್ರದೀಪ್ ಈಶ್ವರ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:44 IST
Last Updated 21 ಜುಲೈ 2025, 4:44 IST
ಚಿಕ್ಕಬಳ್ಳಾಪುರದ 22ನೇ ವಾರ್ಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ನಡೆಸಿದರು
ಚಿಕ್ಕಬಳ್ಳಾಪುರದ 22ನೇ ವಾರ್ಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ನಡೆಸಿದರು   

ಚಿಕ್ಕಬಳ್ಳಾಪುರ: ಎಲ್ಲರೂ ದೇವರ ಕೇಳಿಕೊಂಡು ಶಾಸಕರಾದರೆ ನಾನು ದೇವರೇ ನಿರ್ಧಾರ ಮಾಡಿರುವ ಶಾಸಕ. 15ರಿಂದ 20 ವರ್ಷ ಶಾಸಕನಾಗಿರುವೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮುಂದಿನ ವಾರ ಚಿಕ್ಕಬಳ್ಳಾಪುರ ಕ್ಷೇತ್ರದ ಮಹಿಳೆಯರಿಗೆ ಸೀರೆ ವಿತರಿಸುವೆ. ಸೂರತ್‌ನಲ್ಲಿ ಮಳೆ ಹೆಚ್ಚಿರುವ ಕಾರಣ ಅಲ್ಲಿಂದ ಸೀರೆ ಬರುವುದು ತಡವಾಗಿದೆ. ಇದು ಮೂರನೇ ವರ್ಷದ ಸೀರೆ ವಿತರಣೆ ಕಾರ್ಯಕ್ರಮ. ಮುಂದಿನ ತಿಂಗಳು ವಿದ್ಯಾರ್ಥಿಗಳಿಗೆ ಬಟ್ಟೆ ವಿತರಿಸುವೆ. ವಿದ್ಯಾರ್ಥಿ ವೇತನ ನೀಡುತ್ತಿದ್ದೇನೆ. ಹೀಗೆ ನಿರಂತವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಅಭಿವೃದ್ಧಿ ವಿಚಾರವಾಗಿ ದೂರದೃಷ್ಟಿ ಮುಖ್ಯ. ಚಿಕ್ಕಬಳ್ಳಾಪುರಕ್ಕೆ ಮೆಟ್ರೊ ತರಲು ಐದಾರು ಸಾವಿರ ಕೋಟಿ ಅಗತ್ಯ. ನಂದಿ ದೇಗುಲದ ಅಭಿವೃದ್ಧಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ₹ 500 ಕೋಟಿ ಕೇಳಿದರೆ ಕೊಡುವರೇ? ಭೋಗ ನಂದೀಶ್ವರ ದೇಗುಲವನ್ನು ಯುನೆಸ್ಕೊ ಪಾರಂ‍ಪರೀಕ ತಾಣಗಳ ಪಟ್ಟಿಗೆ ಸೇರಿಸಿದರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. 

ADVERTISEMENT

ನಂದಿ ದೇಗುಲಕ್ಕೆ 8ನೇ ಶತಮಾನದ ಇತಿಹಾಸವಿದೆ. ಯುನೆಸ್ಕೊ ಪಟ್ಟಿಗೆ ಸೇರಲು 10 ಷರತ್ತು ಇವೆ. ಅದರಲ್ಲಿ ಮೂರರಿಂದ ನಾಲ್ಕು ನಿಬಂಧನೆಗಳಿಗೆ ಈ ದೇಗುಲ ಒಳಪಡುತ್ತದೆ. ಯುನೆಸ್ಕೊ ಪಾರಂಪರೀಕ ಪಟ್ಟಿಗೆ ಸೇರಿಸುವ ಬಗ್ಗೆ ಐಎಎಸ್ ಅಧಿಕಾರಿಗಳನ್ನು ಕೇಳಿದೆ. ಅವರು ನಾವು ಪ್ರಸ್ತಾವ ಸಲ್ಲಿಸಿದರೆ 10ರಿಂದ 20 ವರ್ಷ ಆಗುತ್ತದೆ ಎಂದರು. ಆದ್ದರಿಂದ ಸರ್ಕಾರದಿಂದಲೇ ಪ್ರಸ್ತಾವ ಸಲ್ಲಿಸುತ್ತೇವೆ ಎಂದರು.

ಯುನೆಸ್ಕೊ ಜ್ಯೂರಿ ಸದಸ್ಯರಲ್ಲಿ ಇಂಗ್ಲೆಂಡ್, ಅಮೆರಿಕದವರು ಇರುತ್ತಾರೆ. ಅವರಿಗೆ ನಂದಿ ದೇಗುಲದ ಇತಿಹಾಸ ತಿಳಿಸಬೇಕು. ಅವರ ಗಮನ ಸೆಳೆಯಲು ಅಂತರರಾಷ್ಟ್ರೀಯ ಮಟ್ಟದ ಪ್ರಭಾವ ಇರುವವರು ಅಗತ್ಯ. ಆದ್ದರಿಂದ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಯುನೆಸ್ಕೊ ಪಟ್ಟಿ ಸೇರಿದರೆ ಅಂತರರಾಷ್ಟ್ರೀಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸರ್ಕಾರಕ್ಕೆ ಆದಾಯ ಹೆಚ್ಚುತ್ತದೆ. ಆಗ ಸಹಜವಾಗಿ ಚಿಕ್ಕಬಳ್ಳಾ‍ಪುರಕ್ಕೆ ಮೆಟ್ರೊ ಬರುತ್ತದೆ. ವಿಮಾನ ನಿಲ್ದಾಣವಿದೆ ಎನ್ನುವ ಕಾರಣಕ್ಕೆ ದೇವನಹಳ್ಳಿಗೆ ಮೆಟ್ರೊ ಬಂದಿದೆ. ಅದೇ ರೀತಿಯಲ್ಲಿ ಯುನೆಸ್ಕೊ ಪಟ್ಟಿಗೆ ಸೇರಿದರೆ ಅನುಕೂಲವಾಗಲಿದೆ. ನನ್ನ ದೂರದೃಷ್ಟಿ ಈಗ ಅರ್ಥವಾಗದೇ ಇರಬಹುದು 10 ರಿಂದ 12 ವರ್ಷಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಸರ್ಕಾರ, ಸದ್ಗುರು ಅವರ ಸಹಕಾರದಲ್ಲಿ ಭೋಗ ನಂದೀಶ್ವರ ದೇಗುಲಕ್ಕೆ ಯುನೆಸ್ಕೊ ಪಾರಂಪರೀಕ ತಾಣದ ಸ್ಥಾನ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದೇನೆ ಎಂದರು.

ನನ್ನ ಏಕೆ ಇಷ್ಟಪಡುವಿರೊ ಗೊತ್ತಿಲ್ಲ, ಆದರೆ ಅಮ್ಮ ಆಂಬುಲೆನ್ಸ್ ಕಾರಣದಿಂದ ನನ್ನ ಮೇಲೆ ಪ್ರೀತಿ ತೋರಲೇಬೇಕು. ಆಂಬುಲೆನ್ಸ್‌ಗೆ ತಿಂಗಳಿಗೆ ₹ 15 ಲಕ್ಷ ವೆಚ್ಚ ಮಾಡುತ್ತಿದ್ದೇನೆ. 10 ಆಂಬುಲೆನ್ಸ್‌ಗಳಿವೆ. 20 ಚಾಲಕರು ಇದ್ದಾರೆ. ಅದರ ನಿರ್ವಹಣೆ, ಡೀಸೆಲ್ ಸೇರಿದಂತೆ ಎಲ್ಲವೂ ನನ್ನದೇ. ಒಂದು ರೂಪಾಯಿ ಸಹ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ವರ್ಷಕ್ಕೆ ₹ 1.50 ಕೋಟಿ ಉಳಿತಾಯವಾದರೆ ಅದರಲ್ಲಿ ಮನೆ ತೆಗೆದುಕೊಳ್ಳಬಹುದು. ಆದರೆ ನನ್ನ ತಂದೆ, ತಾಯಿಗೆ ಆದ ಸ್ಥಿತಿ ಬೇರೆಯವರಿಗೆ ಆಗಬಾರದು ಎಂದು ನಿಷ್ಕಲ್ಮಷ ಮನಸ್ಸಿನಿಂದ ಅಮ್ಮ ಆಂಬುಲೆನ್ಸ್ ಬಿಟ್ಟಿದ್ದೇನೆ ಎಂದು ಹೇಳಿದರು.

ಬಿಜೆಪಿಯವರು ಮಾಡಿದ್ದೇನೆ: ‘ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಅವರು ಮಾಡಿದ್ದನ್ನೇ ನಾವು ಮಾಡುತ್ತಿದ್ದೇವೆ. ಅನುದಾನವಿಲ್ಲದೆ ಹಳ್ಳಿಗಳಿಗೆ ಹೋಗಲು ಸಾಧ್ಯವಿಲ್ಲ. ಈಗಾಗಲೇ 190 ಹಳ್ಳಿಗಳ ಪ್ರವಾಸ ಮಾಡಿದ್ದೇನೆ ಎಂದರು.  

ಮುಷ್ಟೂರು ರಸ್ತೆ ಕಾಮಗಾರಿ ನಡೆಯುತ್ತಿದೆ. ಇಟ್ಟಪ್ಪನಹಳ್ಳಿ, ದಿನ್ನೆಹೊಸಹಳ್ಳಿ ರಸ್ತೆ ಕಾಮಗಾರಿ ಪೂರ್ಣವಾಗಿದೆ. ಜಡಲತಿಮ್ಮನಹಳ್ಳಿ ರಸ್ತೆ ಪ್ರಾರಂಭವಾಗಬೇಕಿದೆ. ಕಂದವಾರ ರಸ್ತೆ ಟೆಂಡರ್ ಹಂತದಲ್ಲಿ ಇದೆ ಎಂದರು.

ನಗರಸಭೆ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರು ಈ ವೇಳೆ ಹಾಜರಿದ್ದರು.

22ನೇ ವಾರ್ಡ್‌ನಲ್ಲಿ ನಮಸ್ತೆ ಚಿಕ್ಕಬಳ್ಳಾಪುರ

ಶಾಸಕ ಪ್ರದೀಪ್ ಈಶ್ವರ್ 22ನೇ ವಾರ್ಡ್‌ನ ವಿನಾಯಕ ನಗರದಲ್ಲಿ ಭಾನುವಾರ ಬೆಳಿಗ್ಗೆ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ನಡೆಸಿದರು. ಕೊಳವೆಬಾವಿ ಕೊರೆಸಿಕೊಡುವಂತೆ ರಸ್ತೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಕೋರಿದ್ದಾರೆ. ಇವುಗಳನ್ನು ಮಾಡಿಕೊಡಲಾಗುವುದು. ರಾಜಕಾಲುವೆ ಒತ್ತುವರಿ ವಿಚಾರವಾಗಿ ಕಾನೂನು ರೀತಿ ಕ್ರಮವಹಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.