ADVERTISEMENT

ಮೈತ್ರಿಯ ಒಳಜಗಳದಿಂದ ಉಪಚುನಾವಣೆ

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 5:44 IST
Last Updated 26 ನವೆಂಬರ್ 2019, 5:44 IST
ಬಿ.ಜೆ.ಪುಟ್ಟಸ್ವಾಮಿ
ಬಿ.ಜೆ.ಪುಟ್ಟಸ್ವಾಮಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಮೂರನೇ ಒಂದು ಭಾಗ ಹಿಂದುಳಿದ ವರ್ಗದ ಮತದಾರರಿದ್ದಾರೆ. ಉಪ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಮತಗಳು ನಿರ್ಣಾಯಕವಾಗಲಿವೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಕಳೆದುಕೊಳ್ಳಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಯಾರು ಪ್ರಚಾರಕ್ಕೆ ಹೋಗುತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿ, ಸ್ಥಿರ ಸರ್ಕಾರ ಬೇಕಿಲ್ಲ’ ಎಂದರು.

ADVERTISEMENT

ಫಲಿತಾಂಶದ ಬಳಿಕ ಮತ್ತೆ ಅವಕಾಶಕ್ಕೆ ಎದುರು ನೋಡುತ್ತಿರುವ ಕುಮಾರಸ್ವಾಮಿಗೆ ಹಾಗೂ ಮಧ್ಯಂತರ ಚುನಾವಣೆಗೆ ಕಾಯುತ್ತಿರುವ ಸಿದ್ದರಾಮಯ್ಯಗೆ ಭ್ರಮನಿರಸನವಾಗಲಿದೆ ಎಂದರು.

ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಬಾಡಿಗೆ ಕಾರ್ಮಿಕರಂತೆ ನೋಡಿದರು. ಅವರ ಕ್ಷೇತ್ರಗಳಿಗೆ ಅನುದಾನ ಕೊಡಲಿಲ್ಲ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿಯೊಬ್ಬರು ಐಷಾರಾಮಿ ಹೋಟೆಲ್‌ನಲ್ಲಿ ಕೂತು ಆಡಳಿತ ನಡೆಸಿದ ಕೀರ್ತಿ ಕುಮಾರಸ್ವಾಮಿಗೆ ಸಲ್ಲುತ್ತದೆ. ಉಪ ಚುನಾವಣೆ ಫಲಿತಾಂಶ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಕಣ್ಮರೆಯಾಗಲಿದೆ ಎಂದು ಭವಿಷ್ಯ ನುಡಿದರು.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರ ಒಳ ಜಗಳದಿಂದ ಉಪ ಚುನಾವಣೆ ಬಂದಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಎಚ್.ಡಿ.ರೇವಣ್ಣ ಅಘೋಷಿತ ಮುಖ್ಯಮಂತ್ರಿ ಆಗಿದ್ದರು. ಸರ್ಕಾರದಲ್ಲಿ ಕುಮಾರಸ್ವಾಮಿ ಕುಟುಂಬ ಹಸ್ತಕ್ಷೇಪ ಮಾಡುತ್ತಿತ್ತು. ಮೈತ್ರಿ ಸರ್ಕಾರದಲ್ಲಿ ಶಾಸಕರಿಗೆ ಗೌರವ ಸಿಗುತ್ತಿರಲಿಲ್ಲ ಎಂದು ಹೇಳಿದರು.

ರಾಜ್ಯದ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಅಭಿವೃದ್ಧಿ, ಸ್ಥಿರ ಸರ್ಕಾರ ಕೊಡುವ ಶಕ್ತಿ ಕೇವಲ ಬಿಜೆಪಿಗೆ ಮಾತ್ರ ಇದೆ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ವಿ.ಮಂಜುನಾಥ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ರಾಮಲಿಂಗಪ್ಪ ಇದ್ದರು.

*
ಅನರ್ಹ ಶಾಸಕರು ಮೈತ್ರಿ ಸರ್ಕಾರದಲ್ಲಿ ಆದ ನೋವು, ಅಪಮಾನ ತಾಳದೇ ಅವರಗಾಗಿಯೇ ಬಿಜೆಪಿ ಸೇರಿದ್ದಾರೆ. ಅವರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ತಾರತಮ್ಯ ಮಾಡಲಾಗುತ್ತಿತ್ತು.
-ಬಿ.ಜೆ.ಪುಟ್ಟಸ್ವಾಮಿ, ಅಧ್ಯಕ್ಷ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.