ADVERTISEMENT

ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ

ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣದಲ್ಲಿ ಪೊಕ್ಸೊ ಪ್ರಕರಣಗಳ ತ್ವರಿತ ವಿಚಾರಣೆ ನ್ಯಾಯಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 13:51 IST
Last Updated 5 ಮಾರ್ಚ್ 2020, 13:51 IST
ಪೊಕ್ಸೊ ಪ್ರಕರಣಗಳ ತ್ವರಿತ ವಿಚಾರಣೆ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅವರು ಉದ್ಘಾಟಿಸಿದರು.
ಪೊಕ್ಸೊ ಪ್ರಕರಣಗಳ ತ್ವರಿತ ವಿಚಾರಣೆ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅವರು ಉದ್ಘಾಟಿಸಿದರು.   

ಚಿಕ್ಕಬಳ್ಳಾಪುರ: ಜಿಲ್ಲಾ ನ್ಯಾಯಾಲಯದ ನೂತನ ಸಂಕೀರ್ಣದಲ್ಲಿನ ‘ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆ’ (ಪೊಕ್ಸೊ) ಅಡಿ ಪ್ರಕರಣಗಳ ತ್ವರಿತ ವಿಚಾರಣೆ ನ್ಯಾಯಾಲಯವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಈ ನ್ಯಾಯಾಲಯ ತೆರೆಯಲಾಗಿದೆ. ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ ಬಿ.ಸಿ. ಭಾನುಮತಿ ಅವರು ಇಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತರ ವಿಚಾರಣೆ ನಡೆಸುವ ನ್ಯಾಯಾಧೀಶರು ಮಕ್ಕಳೊಟ್ಟಿಗೆ ಸಹಾನುಭೂತಿಯಿಂದ ಬೆರೆತು ನ್ಯಾಯದಾನ ಮಾಡುವ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತ ಮಕ್ಕಳ ವಿಚಾರಣೆ ನಡೆಸುವಾಗ ನ್ಯಾಯಾಧೀಶರು ಅತ್ಯಂತ ಸೂಕ್ಷ್ಮ ಮನಃಸ್ಥಿತಿಯಿಂದ ವ್ಯವಹರಿಸಬೇಕು. ಎಲ್ಲೂ ಮಗುವಿನ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು‘ಎಂದು ತಿಳಿಸಿದರು.

ADVERTISEMENT

‘ಮಕ್ಕಳ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರ ಧೋರಣೆ ಕಕ್ಷಿದಾರರ ರಕ್ಷಣೆಯಷ್ಟೇ ಆಗಬಾರದು. ಮಗುವಿನ ಭವಿಷ್ಯವನ್ನೂ ಆಲೋಚಿಸುವಂತಿರಬೇಕು’ ಎಂದರು.

ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ ಬಿ.ಸಿ. ಭಾನುಮತಿ, 3ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ನಟರಾಜ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.